ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಾ, ಹಣ ಸಂಪಾದನೆ ಮಾಡುತ್ತಿದ್ದ ನೈಜಿರಿಯಾ ದೇಶದ ಪ್ರಜೆಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಾರೆನ್ಸ್ ಜೆನ್ವೋಕ್ ಬಂಧಿತ ನೈಜಿರಿಯಾ ಪ್ರಜೆ. ಈತನಿಂದ ಎಂಡಿಎಂಎ ಕ್ರಿಸ್ಟಲ್ 6 ಗ್ರಾಂ, ನೀಲಿ ಬಣ್ಣದ ಎಂಡಿಎಂಎ ಎಕ್ಸ್ಟಿಸಿ 87 ಮಾತ್ರೆಗಳು, ಗುಲಾಬಿ ಬಣ್ಣದ 9 ಎಕ್ಸ್ಟಿಸಿ ಮಾತ್ರೆಗಳು, ಹಳದಿ ಬಣ್ಣದ 4 ಎಕ್ಸ್ಟಿಸಿ ಪಿಲ್ಸ್ ಮತ್ತು ಜಿಪ್ ಲಾಕ್ ಪ್ಲಾಸ್ಟಿಕ್ ಕವರ್ಸ್ಗಳನ್ನು ವಶಕ್ಕೆ ಪಡೆದಿರುತ್ತಾರೆ.
ತಲಘಟ್ಟಪುರ ಪೊಲೀಸರಿಗೆ 100 ಅಡಿ ರಸ್ತೆ, ತುರಹಳ್ಳಿ ಪಾರೆಸ್ಟ್ ರಸ್ತೆಯಿಂದ ಚಿಕ್ಕೇಗೌಡನ ಪಾಳ್ಯಕ್ಕೆ ಹೋಗುವ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪ ವಿದೇಶಿ ಪ್ರಜೆಯೊಬ್ಬ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುಗಳನ್ನು ವಿದೇಶ ದಿಂದ ತರಿಸಿಕೊಂಡು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆ ಯಿಂದ ತಿಳಿದುಬಂದಿದೆ.
ಆರೋಪಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದು ವರೆದಿದೆ. ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್, ಇನ್ಸ್ಪೆಕ್ಟರ್ ಸಿದ್ದರಾಜು, ಸಬ್ಇನ್ಸ್ಪೆಕ್ಟರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡಿತ್ತು.
ಈ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಪ್ರಶಂಶಿಸಿರುತ್ತಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB