ಮಧುಗಿರಿ: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವು ಅನ್ನದಾತರು ಮತ್ತು ಬಡವರ ಪಾಲಿಗೆ ಮಾರಕವಾಗಲಿದೆ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗಿರೇಗೌಡನಹಳ್ಳಿ ಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಯೂನಿಟ್ ದರ ಏರಿಕೆಯಾಗಲಿದೆ. ಅಲ್ಲದೆ, ಕೃಷಿ ಪಂಪ್ ಸೆಟ್ ಗಳಿಗೂ ಇವುಗಳನ್ನು ಅಳವಡಿಸುವ ಹುನ್ನಾರ ನಡೆದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜೆಸ್ಕಾಂ ಈಗಾಗಲೇ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಯಲು ಸೀಮೆಯ ಪ್ರಮುಖ ಬೆಳೆಯಾದ ಹುಣಸೆ ಕೃಷಿಯು ಕೂಲಿ ಮತ್ತು ಸಂಸ್ಕರಣಾ ವೆಚ್ಚದಿಂದಾಗಿ ನಷ್ಟದಲ್ಲಿದೆ. ಆದ್ದರಿಂದ ಹುಣಸೆಯನ್ನು ‘ಫಸಲ್ ಭೀಮಾ’ ಯೋಜನೆಯಡಿ ತರಬೇಕು ಮತ್ತು ಜಿಲ್ಲೆಯಲ್ಲಿ ಹುಣಸೆ ಸಂಸ್ಕರಣಾ ಘಟಕ ಹಾಗೂ ಪ್ರತ್ಯೇಕ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಳೆದ 13 ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಎತ್ತಿನಹೊಳೆ ಯೋಜನೆಯನ್ನು ಚುರುಕುಗೊಳಿಸಿ, ಈ ವರ್ಷಾಂತ್ಯದೊಳಗೆ ತಾಲೂಕಿನ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸಾಗುವಳಿ ಚೀಟಿ ವಿತರಣೆ ಸೇರಿದಂತೆ ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಏಪ್ರಿಲ್ 13ರಂದು ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ದೊಡ್ಡಮಾಳಯ್ಯ, ಭಾಗ್ಯಮ್ಮ, ತಿಮ್ಮಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


