ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬಸ್ ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ತಂಗುದಾಣಗಳಿಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣದ ಹೃದಯಭಾಗದಲ್ಲಿರುವ ರಾಘವೇಂದ್ರ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಆಶ್ರಯವಿಲ್ಲದೆ ಸಾರ್ವಜನಿಕರು ಬಿಸಿಲು ಮತ್ತು ಮಳೆಯಲ್ಲಿ ನಿಂತೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ರಾಘವೇಂದ್ರಸ್ವಾಮಿ ದೇವಸ್ಥಾನದ ಮುಂಭಾಗ, ಪಾವಗಡ ವೃತ್ತ ಮತ್ತು ಗೌರಿಬಿದನೂರು ವೃತ್ತಗಳು ತುಮಕೂರು, ಬೆಂಗಳೂರು, ಶಿರಾ ಸೇರಿದಂತೆ ಅಂತರರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರಗಳಾಗಿವೆ. ಹಿಂದೆ ರಾಘವೇಂದ್ರ ವೃತ್ತದಲ್ಲಿ ತಂಗುದಾಣವಿತ್ತಾದರೂ, ಶಿಥಿಲಗೊಂಡಿದ್ದ ಆ ಕಟ್ಟಡವು ಕೆಲವು ವರ್ಷಗಳ ಹಿಂದೆ ಮಳೆಗೆ ಬಿದ್ದು ಹೋಗಿದೆ. ಅಂದಿನಿಂದ ಈವರೆಗೆ ಹೊಸ ತಂಗುದಾಣ ನಿರ್ಮಾಣವಾಗದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ.
“ಕಾಲೇಜು ಮುಗಿಸಿ ಮನೆಗೆ ಹೋಗಲು ಪ್ರತಿದಿನ ಬಸ್‌ಗಾಗಿ ಗಂಟೆಗಟ್ಟಲೆ ನಿಂತೇ ಕಾಯಬೇಕಾಗಿದೆ. ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು” ಎಂದು ಸ್ಥಳೀಯ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು, “ಪಟ್ಟಣದಲ್ಲಿ ಸದ್ಯ ₹25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ತಕ್ಷಣ ರಾಘವೇಂದ್ರ ವೃತ್ತ ಹಾಗೂ ಇತರೆಡೆ ಹೈಟೆಕ್ ತಂಗುದಾಣಗಳನ್ನು ನಿರ್ಮಿಸಲು ಶಾಸಕ ಕೆ.ಎನ್.ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ಸೂಚನೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಕಾಮಗಾರಿ ಆರಂಭವಾಗಿ ಪ್ರಯಾಣಿಕರ ಸಮಸ್ಯೆ ನೀಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


