ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ಮಧುಗಿರಿ ತಾಲ್ಲೂಕಿನ ಬಿ.ನಾಗೇಶಬಾಬು ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ನಾಗೇಶ್ ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳ ಅಂತರದಿಂದ ಸೋತಿದ್ದ ಕೊಂಡವಾಡಿ ಚಂದ್ರಶೇಖರ್ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಆಯ್ಕೆಯನ್ನು ಘೋಷಣೆ ಮಾಡಬೇಕಿದೆ.
ಮಧುಗಿರಿ ತಾಲ್ಲೂಕು ಬಂದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ನಾಗೇಶ್ ಬಾಬು ಪ್ರತಿನಿಧಿಸಿದ್ದರು. ಈ ಸಂಘವನ್ನು ನಿಯಮಾನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದು, ಮತದಾನಕ್ಕೆ ಕೋರ್ಟ್ ಅವಕಾಶ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಾಬು ಆಯ್ಕೆ ಆಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್ ರದ್ದುಪಡಿಸಿದ್ದು, ಇದರಿಂದಾಗಿ ನಿರ್ದೇಶಕ ಸ್ಥಾನ ಕಳೆದುಕೊಂಡಿದ್ದಾರೆ.
ತುಮುಲ್ ನಿರ್ದೇಶಕರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಡೇರಿಯಿಂದ ಒಂದು ಮತ ಚಲಾಯಿಸಲು ಅವಕಾಶ ಇರುತ್ತದೆ. ಡೇರಿಯಿಂದ ಡೆಲಿಗೇಟ್ಸ್ ಪಡೆದವರು ಮತದಾನದಲ್ಲಿ ಭಾಗವಹಿಸುತ್ತಾರೆ. ಆದರೆ ನಾಗೇಶ್ ಬಾಬು ಪ್ರತಿನಿಧಿಸುವ ಬಂದ್ರೇನಹಳ್ಳಿ ಡೇರಿಗೆ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಅನರ್ಹರ ಪಟ್ಟಿಗೆ ಸೇರಿಸಲಾಗಿತ್ತು. ಇಂತಹ ಸಂಘಕ್ಕೆ ಮೂರು ನೋಟಿಸ್ ನೀಡಲಾಗುತ್ತದೆ. ಈ ಸಂಘಕ್ಕೂ ನೋಟಿಸ್ ನೀಡಿದ್ದು, ಅದಕ್ಕೆ ಕೊಟ್ಟಿದ್ದ ಉತ್ತರ ಸಮಂಜಸವಾಗಿಲ್ಲ ಎಂಬ ಕಾರಣ ನೀಡಿ, ಮತದಾರರ ಅರ್ಹರ ಪಟ್ಟಿಗೆ ಸೇರಿಸಲಾಗಿತ್ತು.
ಮತದಾನಕ್ಕೆ ಅವಕಾಶ ನೀಡದೆ ಅನರ್ಹಗೊಳಿದ್ದನ್ನು ಪ್ರಶ್ನಿಸಿ ನಾಗೇಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಕೂಲಂಕಷವಾಗಿ ವಿಚಾರಣೆ ನಡೆದ ನಂತರ ತೀರ್ಪು ಹೊರ ಬಂದಿದೆ. ನನ್ನನ್ನೇ ನಿರ್ದೇಶಕರನ್ನಾಗಿ ಚುನಾವಣೆ ಅಧಿಕಾರಿ ಘೋಷಣೆ ಮಾಡಲಿದ್ದಾರೆ ಎಂದು ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಕೊಂಡವಾಡಿ ಚಂದ್ರಶೇಖರ್ ತೊಡೆತಟ್ಟಿದ್ದರು. ತಮ್ಮ ಆಪ್ತ ನಾಗೇಶ್ ಬಾಬು ಅವರನ್ನು ಗೆಲ್ಲಿಸಿಕೊಳ್ಳಲು ರಾಜಣ್ಣ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆರಂಭದಲ್ಲಿ ಮತದಾನಕ್ಕೆ ಅವಕಾಶ ಸಿಗದಿದ್ದರೂ ಕೋರ್ಟ್ ಮೂಲಕ ಅವಕಾಶ ಸಿಗುವಂತೆ ಮಾಡಿದ್ದರು. ಈಗ ಕೋರ್ಟ್ ತೀರ್ಪಿನಿಂದ ನಾಗೇಶ್ ಬಾಬು ಜತೆಗೆ ರಾಜಣ್ಣ ಅವರಿಗೂ ಹಿನ್ನೆಡೆಯಾದಂತಾಗಿದೆ. ತುಮುಲ್ ಚುನಾವಣೆಯಲ್ಲಿ ಚಂದ್ರಶೇಖರ್ ಮೇಲುಗೈ ಸಾಧಿಸಿದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC