ಧಾರವಾಡ : ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಧಾರವಾಡದಲ್ಲಿ ಸೋಮವಾರ ಐಐಐಟಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈಗ ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ. ಜ್ಞಾನ ವಿಕಾಸ ಎಂದು ಹೆಸರಿಡಲಾಗಿದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ಆಶಿಸಿದರು.
ಸಾಧಾರಣ ಕುಟುಂಬದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದು ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ ಎಂದು ಹೇಳಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಧಾರವಾಡದ ಐಐಐಟಿ ದೇಶದಲ್ಲೇ ನಂಬರ್ ಒನ್ ಆಗಬೇಕು. ಅಂದು ಈ ಜಮೀನಿನಲ್ಲಿ ರೈತರು ಬೆಳೆ ಬೆಳೆಯುತ್ತಿದ್ದರು. ಆದರೆ ಇವತ್ತು ಅದೇ ಜಮೀನಿನಲ್ಲಿ ಜ್ಞಾನ ಬೆಳೆಯಲಾಗುತ್ತಿದೆ. ಭೂಮಿ ನೀಡಿದ ರೈತರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಇಂದು ಜಿಮ್ ಖಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಾಲಿಕೆ ವತಿಯಿಂದ ಪೌರ ಸನ್ಮಾನ ಮಾಡಲಾಯಿತು. ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ರಾಷ್ಟ್ರಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಹಾಗೂ 900 ಗ್ರಾಂ ತೂಕದ ಸಿದ್ಧಾರೂಢ ಸ್ವಾಮೀಜಿಗಳ ಬೆಳ್ಳಿ ಮೂರ್ತಿ ಸ್ಮರಣಿಕೆಯಾಗಿ ಕೊಟ್ಟು ಯಾಲಕ್ಕಿ ಹಾರ ಹಾಕಿ ಸನ್ಮಾನಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy