ನಮ್ಮತುಮಕೂರು ಎಕ್ಸ್’ಕ್ಲೂಸಿವ್ ರಿಪೋರ್ಟ್: ಮೇಕೆ ಸಾಕಾಣಿಕೆಗಾಗಿ ಮುದ್ರಾ ಲೋನ್ ಗೆ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಲೋನ್ ನ ಹಣವನ್ನು ಬಿಡುಗಡೆ ಮಾಡದೇ ಸತಾಯಿಸಿದ ಮಧುಗಿರಿ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುರವರ ಬ್ಯಾಂಕ್ ಶಾಖೆಗೆ ತುಮಕೂರು ಗ್ರಾಹಕರ ನ್ಯಾಯಾಲಯವು ಬಿಸಿ ಮುಟ್ಟಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಪುರವರ ಬ್ರಾಂಚ್ ನ ಮುಂದೆ ಮಹಿಳೆಯೊಬ್ಬರು ತೀವ್ರವಾಗಿ ದುಃಖಿತರಾಗಿರುವುದನ್ನು ಕಂಡ ಅಡ್ವಕೇಟ್ ಎಂ.ಎಸ್.ಗಣೇಶ್ ಹಾಗೂ ಅಡ್ವಕೇಟ್ ಶಿವಕುಮಾರ್ ಮೇಷ್ಟ್ರುಮನೆ ಅವರು, ಮಹಿಳೆಯ ಬಳಿ ಏನು ಸಮಸ್ಯೆ ಎಂದು ವಿಚಾರಿಸಿದ್ದಾರೆ. ಈ ವೇಳೆ ತನ್ನ ಹೆಸರು ಲಕ್ಷ್ಮೀನರಸಮ್ಮ ಎಂದು ತಿಳಿಸಿದ್ದು, ತನಗೆ ಬ್ಯಾಂಕ್ ನಿಂದಾದ ಅನ್ಯಾಯವನ್ನು ವಿವರಿಸಿದ್ದಾರೆ…
ಲಕ್ಷ್ಮೀನರಸಮ್ಮ ಮೇಕೆ ಸಾಕಾಣಿಕೆಗಾಗಿ 6 ಲಕ್ಷ ರೂಪಾಯಿಗಾಗಿ ಮುದ್ರಾ ಯೋಜನೆಯಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುರವರ ಬ್ರಾಂಚ್ ಗೆ ಅರ್ಜಿ ಸಲ್ಲಿಸುತ್ತಾರೆ. ಬ್ಯಾಂಕ್ ವೆರಿಫಿಕೇಷನ್ ಮಾಡಿ 3 ಲಕ್ಷ ಮಂಜೂರು ಮಾಡ್ತೀವಿ ಎಂದು ಹೇಳಿ ಮಂಜೂರು ಮಾಡ್ತಾರೆ.
ಗೋಡ್ ಶೆಡ್ , ಮೇಕೆ ಸಾಕಣಿಕೆಗೆ ಬೇಕಾದ ಪರಿಕರಗಳನ್ನು ತೆಗೆದುಕೊಳ್ಳುವುದಕ್ಕೆ ಮಹಿಳೆ ಹಣವನ್ನು ಬಂಡವಾಳ ಹಾಕುತ್ತಾರೆ. ಬಳಿಕ ಬ್ಯಾಂಕ್ ಮೇಕೆ ಸಾಕಣಿಕೆಗೆ ಅಪ್ರುವಲ್ ನೀಡಿದಾಗ ಮೇಕೆ ಮರಿಗಳನ್ನು ಮಾರಾಟಗಾರರಿಂದ 3 ಲಕ್ಷ ಬೆಲೆ ಬಾಳುವ ಮರಿಗಳನ್ನು ಮಹಿಳೆ ಖರೀದಿ ಮಾಡ್ತಾರೆ. ನಂತರ ಬ್ಯಾಂಕ್ ನ ಮ್ಯಾನೇಜರ್ ಪಶು ವೈದ್ಯಾಧಿಕಾರಿಗಳ ಜೊತೆಗೆ ಬಂದು ಮೇಕೆಗಳನ್ನು ವೆರಿಫೈ ಮಾಡ್ತಾರೆ, ಮೇಕೆಗಳಿಗೆ ಟ್ಯಾಗ್ ಮಾಡಿದ ಬಳಿಕ ಬ್ಯಾಂಕ್ ಒಂದೂವರೆ ಲಕ್ಷ ರೂ. ಮಂಜೂರು ಮಾಡುತ್ತದೆ. ಇನ್ನೂ ಉಳಿದ ಒಂದೂವರೆ ಲಕ್ಷ ಹಣವನ್ನು ಸ್ವಲ್ಪ ದಿನಗಳ ನಂತರ ಮಂಜೂರು ಮಾಡುವುದಾಗಿ ಬ್ಯಾಂಕ್ ಮ್ಯಾನೇಜರ್ ಹೇಳುತ್ತಾರೆ. ಈ ಹಣವನ್ನು ಮೇಕೆ ಮಾರಾಟಗಾರರ ಅಕೌಂಟ್ ಗೆ ನೇರವಾಗಿ ಪಾವತಿಸುವುದಾಗಿಯೂ ಹೇಳುತ್ತಾರೆ.
ಇದಾದ ಬಳಿಕ ಬ್ಯಾಂಕ್ ಮ್ಯಾನೇಜರ್ ಉಳಿದ ಒಂದೂವರೆ ಲಕ್ಷ ಹಣವನ್ನು ಮಹಿಳೆಯ ಅಕೌಂಟ್ ಗೂ ಪಾವತಿ ಮಾಡದೇ, ಮೇಕೆ ಮಾರಾಟಗಾರರ ಅಕೌಂಟ್ ಗೂ ಪಾವತಿ ಮಾಡದೇ ಸತಾಯಿಸಿದ್ದಾರೆ. ಇತ್ತ ಮೇಕೆ ಮಾರಾಟಗಾರರು ಹಣ ನೀಡುವಂತೆ ಮಹಿಳೆಯನ್ನು ಕೇಳಿದಾಗ ಮಹಿಳೆ ತಿಂಗಳು ಗಟ್ಟಲೆ ಬ್ಯಾಂಕ್ ಗೆ ಬಂದು ಉಳಿದ ಹಣ ಮಂಜೂರು ಮಾಡುವಂತೆ ಮನವಿ ಮಾಡಿದರೂ ಮಂಜೂರು ಮಾಡದೇ ಸತಾಯಿಸಿದ್ದಾರೆ. ಅತ್ತ ಮೇಕೆ ಮಾರಾಟಗಾರ, ತನಗೆ ಪೂರ್ತಿ ಹಣ ನೀಡಿಲ್ಲ ಎಂದು ಮಹಿಳೆಗೆ ಕೊಟ್ಟಿದ್ದ ಮೇಕೆಗಳನ್ನು ವಾಪಸ್ ಕೊಂಡೊಯ್ಯುತ್ತಾನೆ.
ಒಂದೆಡೆಯಲ್ಲಿ ಸಾಲ ಪಡೆದ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸಬೇಕು, ಮತ್ತೊಂದೆಡೆಯಲ್ಲಿ ಸಾಲ ಮಾಡಿ ಖರೀದಿಸಿ ಸಾಕಿದ್ದ ಮೇಕೆಗಳನ್ನೂ ತೆಗೆದುಕೊಂಡು ಹೋಗಲಾಗಿದೆ. ಅತ್ತ ಹಣವೂ ಇಲ್ಲ, ಇತ್ತ ತಲೆಯ ಮೇಲೆ ಸಾಲದ ಹೊರೆಯೂ ಬಿದ್ದಿದ್ದು, ಇದರಿಂದ ಮಹಿಳೆ ಕಂಗಾಲಾಗಿದ್ದಾರೆ.
ಮಹಿಳೆಯ ಸಮಸ್ಯೆಯನ್ನು ಕೇಳಿದ ಅಡ್ವಕೇಟ್ ಗಳು, ಬ್ಯಾಂಕ್ ಗೆ ಈ ಬಗ್ಗೆ ಕೋರ್ಟ್ ನೋಟಿಸ್ ಇಶ್ಯು ಮಾಡುತ್ತಾರೆ. ಇತ್ತ ನೋಟಿಸ್ ಬರುತ್ತಿದ್ದಂತೆಯೇ ಬ್ಯಾಂಕ್ ಉಳಿಕೆ ಹಣವನ್ನು ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಆದರೆ, ಈ ಹಣ ಮಹಿಳೆಯ ಲೋನ್ ಅಕೌಂಟ್ ನಲ್ಲಿ ಕಾಣಿಸುತ್ತದೆ. ಆದರೆ, ಮಹಿಳೆಯ ಅಕೌಂಟ್ ಗೂ ಬಾರದೇ, ಮೇಕೆ ಮಾರಿರುವ ವ್ಯಕ್ತಿಯ ಅಕೌಂಟ್ ಗೆ ಹೋಗದ ಸ್ಥಿತಿಯಲ್ಲಿರುತ್ತದೆ. ಇದು ಒಂದು ರೀತಿಯಲ್ಲಿ ಮೋಸದ ವಹಿವಾಟಾಗಿರುತ್ತದೆ. ಇದನ್ನು ಮನಗಂಡ ಅಡ್ವಕೇಟ್ ಮಹಿಳೆಯ ಪರವಾಗಿ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ.
ಗ್ರಾಹಕರ ನ್ಯಾಯಾಲಯವು ಮಹಿಳೆ ಸಲ್ಲಿಸಿರುವ ದೂರನ್ನು ಪರಾಮರ್ಶಿಸಿ, ಆ ಮಹಿಳೆಗೆ ನೀಡಲಾಗಿರುವ ಒಂದೂವರೆ ಲಕ್ಷ ಸಾಲಕ್ಕೆ ಯಾವುದೇ ಬಡ್ಡಿ ತೆಗೆಯ ಬಾರದು ಎಂದು ಬ್ಯಾಂಕ್ ಗೆ ನಿರ್ದೇಶನ ಮಾಡಿ, ಕಂತುಗಳಲ್ಲಿ ಒಂದೂವರೆ ಲಕ್ಷ ರೂ.ಗಳನ್ನು ಮರುಪಾವತಿ ಮಾಡುವಂತೆ ಆದೇಶ ಮಾಡಿದೆ. ಮಹಿಳೆಗೆ ಆಗಿರುವ ನಷ್ಟಕ್ಕೆ ಒಂದೂವರೆ ಲಕ್ಷ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ. ಸಮಯಕ್ಕೆ ಸರಿಯಾಗಿ ಹಣ ಪಾವತಿಸದಕ್ಕೆ 50 ಸಾವಿರ ದಂಡ ವಿಧಿಸಿದೆ. ಜೊತೆಗೆ ವ್ಯಾಜ್ಯ ಪರಿಹಾರಕ್ಕೆ 10 ಸಾವಿರ ನೀಡುವಂತೆ ಆದೇಶ ನೀಡುವ ಮೂಲಕ ಮಹಿಳೆಗೆ ನ್ಯಾಯ ನೀಡಿದೆ.
ಬ್ಯಾಂಕ್ ಗಳಿಗೆ ಹೋಗುವ ಗ್ರಾಹಕರನ್ನು ಇನ್ನಿಲ್ಲದ ಕಾರಣಗಳನ್ನು ನೀಡಿ ಸತಾಯಿಸುವ ಬ್ಯಾಂಕ್ ಗಳಿಗೆ ಈ ಪ್ರಕರಣವು ಎಚ್ಚರಿಕೆಯ ಕರೆ ಘಂಟೆಯಾಗಿದೆ. ತುಮಕೂರು ಗ್ರಾಹಕರ ನ್ಯಾಯಾಲಯದ ಈ ಆದೇಶವು ಇತರ ಬ್ಯಾಂಕ್ ಗಳಿಗೂ ಸಂದೇಶ ನೀಡಿದಂತಾಗಿದೆ. ಜೊತೆಗೆ ಸಂಕಷ್ಟದಲ್ಲಿದ್ದ ಮಹಿಳೆಯ ಸಮಸ್ಯೆಯನ್ನು ಬಗೆಹರಿಸಲು ಕಾನೂನಿನ ನೆರವು ನೀಡಿದ ಅಡ್ವಕೇಟ್ ಎಂ.ಎಸ್.ಗಣೇಶ್ ಹಾಗೂ ಅಡ್ವಕೇಟ್ ಶಿವಕುಮಾರ್ ಮೇಷ್ಟ್ರುಮನೆ ಅವರ ಪರಿಶ್ರಮ ಅಭಿನಂದನೀಯವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz