ಮಧುಗಿರಿ: ಕೇಂದ್ರವು ಬಡವರ ವಿರೋಧಿ ಮತ್ತು ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಮತವೂ ಹೋಗದಂತೆ ನೋಡಿಕೊಳ್ಳಬೇಕು ಎಂದು ಬುಧವಾರ ಜನರಿಗೆ ಕರೆ ನೀಡಿದರು.
ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಕರ್ನಾಟಕಕ್ಕೆ ಅಕ್ಕಿ ನೀಡುವುದನ್ನು ನಿರಾಕರಿಸಿದ ಬಿಜೆಪಿಯನ್ನು ನೀಚ ಎಂದು ಕರೆದ ಅವರು, ಕೇಂದ್ರದ ಆಡಳಿತ ಪಕ್ಷವೂ ಮಾನವ ವಿರೋಧಿಯಾಗಿದೆ ಎಂದು ಹೇಳಿದರು.
ಕ್ಷೀರ ಭಾಗ್ಯ ಯೋಜನೆಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ನಾಲ್ಕು ಕೆ.ಜಿ ಮತ್ತು ಐದು ಕೆ.ಜಿಗೆ ಇಳಿಸಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಐದು ಕೆ.ಜಿ ನೀಡುವುದಾಗಿ ಭರವಸೆ ನೀಡಿದ್ದೆ ಎಂದರು.


