ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡರಾತ್ರಿ ಡಿವೈಡರ್ ಮೇಲೆ ಮಲಗಿದ್ದ ಜನರ ಮೇಲೆ ಟ್ರಕ್ ಹರಿದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜಧಾನಿ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ.
ಈ ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಸೀಮಾಪುರಿಯಲ್ಲಿರುವ ರೆಡ್ ಲೈಟ್ ಡಿಟಿಸಿ ಡಿಪೋವನ್ನು ದಾಟುವಾಗ ಅಪಘಾತ ಸಂಭವಿಸಿದೆ.
ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಟ್ರಕ್ ಮಲಗಿದ್ದವರ ಮೇಲೆ ಹರಿದ ಬಳಿಕ ಅದೇ ವೇಗದಲ್ಲಿ ಎಸ್ಕೇಪ್ ಆಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಆರಂಭಿಸಿದ್ದಾರೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಬಳಿಕ ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾದವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, 4 ಮಂದಿಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾಲ್ವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಇನ್ನೊಬ್ಬರು ಪ್ರಾಥಮಿಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಮೃತ ನಾಲ್ವರನ್ನು ಕರೀಂ (52), ಚೋಟ್ಟೆ ಖಾನ್ಸ್ (25), ಶಾ ಆಲಂ (38) ಮತ್ತು ರಾಹುಲ್ (45) ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ಮನೀಶ್ (16) ಮತ್ತು ಪ್ರದೀಪ್ (30) ಎಂದು ಗುರುತಿಸಲಾಗಿದೆ. ಟ್ರಕ್ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy