ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದ ತೊಂದರೆಗೊಳಗಾಗಿರುವವರನ್ನು ರಕ್ಷಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಉಪಪ್ರಧಾನಿ ಜಗಜೀವನರಾಂ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದ ಅವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಳೆಯಿಂದ ಕೆಲ ಕಡೆಗಳಲ್ಲಿ ಹಾನಿಯಾಗಿದೆ, ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಮಳೆ ಹೆಚ್ಚಿರುವ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಹೇಳಿದ್ದೇನೆ. ರಕ್ಷಣಾ ಕಾರ್ಯದ ನಂತರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕ್ಕೊಳ್ಳಲಾಗುವುದು ಎಂದರು.
ಬಾಬು ಜಗಜೀವನರಾಂ ಸ್ಮರಣೆ:
ಇದೇ ಸಂದರ್ಭದಲ್ಲಿ ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಅವರ ಸೇವೆಯನ್ನು ಸ್ಮರಿಸಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ದೇಶ ಆಹಾರದ ಪರಾವಲಂಬನೆ ಸ್ಥಿತಿಯಲ್ಲಿದ್ದಾಗ ಹಸಿರು ಕ್ರಾಂತಿ ಮೂಲಕ ದೇಶವನ್ನು ಆಹಾರ ಸ್ವಾವಲಂಬಿಯಾಗಿಸಿದ್ದು ಬಾಬು ಜಗಜೀವನರಾಮ್ ಎಂದರು.
ರಕ್ಷಣಾ ಖಾತೆ ಸೇರಿದಂತೆ ಹಲವು ಉನ್ನತ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದ ಬಾಬು ಜಗಜೀವನರಾಂ ಅವರು ದಕ್ಷತೆಯಿಂದ ಒಳ್ಳೆಯ ಆಡಳಿತ ನೀಡಿದ್ದರು. ಅವರು ಕೆಲ ವಿಚಾರಗಳಲ್ಲೂ ನಮಗೂ ಪ್ರೇರಣೆಯಾಗಿದ್ದಾರೆ. ರಾಜ್ಯದ ಜನತೆ ಪರವಾಗಿ ಅವರು ಗೌರವ ನಮನಗಳನ್ನು ಸಲ್ಲಿಸಿದ್ದೇನೆ ಎಂದರು.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನಂತರ ದೀನದಲಿತರ ದ್ವನಿಯಾಗಿ ಕೆಲಸ ಮಾಡಿದವರು ಡಾ ಬಾಬು ಜಗಜೀವನರಾಮ್ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


