ಸರಗೂರು: ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾದನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಯಶವಂತಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಶಿಥಿಲಗೊಂಡು ತರಗೆಲೆಯಂತೆ ಉದುರುತ್ತಿವೆ.
ಪ್ರತಿ ದಿನ ಎರಡು ಮೂರು ಮನೆಗಳು ಕುಸಿದು ಬೀಳುತ್ತಿವೆ ಎನ್ನಲಾಗುತ್ತಿದ್ದು, ಮಳೆಯಿಂದ ಶಿಥಿಲಗೊಂಡಿರುವ ಶಾಲಾ ಕಟ್ಟಡ ಮತ್ತು ಬಸ್ ನಿಲ್ದಾಣ ಇಂದೋ ನಾಳೆಯೋ ಕುಸಿದು ಬೀಳಬಹುದಾದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.
ಇನ್ನೂ ಜಮೀನಿನಲ್ಲಿ ಬೆಳೆದಿರುವ ರಾಗಿ, ಹುರುಳಿ ಇನ್ನಿತರ ಬೆಳೆಗಳಂತು ಜಮೀನಿನಲ್ಲೇ ಕೊಳೆತು ನಾರುತ್ತಿದ್ದು, ರೈತರು ಕೂಡ ಕಂಗಾಲಾಗಿದ್ದಾರೆ. ರೈತರ ಜಾನುವಾರುಗಳ ಪರಿಸ್ಥಿತಿ ಹೇಳತೀರದಂತಾಗಿದೆ.
ಕುಟುಂಬದ ಆಹಾರ ಸ್ವಾಲಂಬನೆ ಮತ್ತು ಆಹಾರ ಭದ್ರತೆಗೆ ತುಂಬ ತೊಡಕುಂಟಾಗುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಕೇಂದ್ರೀಕರಿಸಿ ಅಧಿಕಾರಿಗಳು ಮಾನವೀಯತೆಯಿಂದ ಪಾರದರ್ಶಕವಾದ ಪರಿಶೀಲನೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಈ ಬಗ್ಗೆ ಸರ್ಕಾರ ತಕ್ಷಣವೇ ಗಮನ ಹರಿಸಬೇಕು ಮನೆ ನಿರ್ಮಾಣ ಮಾಡಿಕೊಳ್ಳಲು 10 ಲಕ್ಷ ಪರಿಹಾರ ನೀಡುವುದರ ಜೊತೆಗೆ ಆಹಾರ ಭದ್ರತಗಾಗಿ ಸೂಕ್ತ ನಷ್ಟ ಭರಿಸಿಕೊಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700