ದಾವಣಗೆರೆ: ಕನ್ನಡದ ಕಬೀರ್ ಎಂದೇ ಹೆಸರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರರು ಮನಸ್ಸುಗಳನ್ನು ಬೆಸೆಯುವ ಸೌಹಾರ್ದದ ಕನಸುಗಾರರಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಕಂಬನಿ ಮಿಡಿದರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರ ಹಾಗೂ ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನದ ಗೌರವಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು , ನೀ ಎಂತಾದರೂ ಇರು, ನೀ ಹೇಗಾದರೂ ಇರು. ಆದರೆ ನೀತಿವಂತನಾಗಿ ಬಾಳು. ನಿನ್ನ ಬದುಕಿನಲ್ಲಿ, ವ್ಯವಹಾರದಲ್ಲಿ ನೀತಿ ತಪ್ಪಿ ಬದುಕಬೇಡ ಎಂದು ತಮ್ಮ ಪ್ರವಚನದಲ್ಲಿ ಸದಾ ಹೇಳುತ್ತಿದ್ದರು ಎಂದು ವಾಮದೇವಪ್ಪ ಅವರು ಇಬ್ರಾಹಿಂ ಸುತಾರ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು.
ಹಿರಿಯ ಪತ್ರಕರ್ತ, ರಂಗಕರ್ಮಿ ಭಾ.ಮ.ಬಸವರಾಜಯ್ಯ ಮಾತನಾಡಿ ಇಬ್ರಾಹಿಂ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970 ರಲ್ಲಿ “ಭಾವೈಕ್ಯ ಜನಪದ ಸಂಗೀತ ಮೇಳ” ವನ್ನು ಸ್ಥಾಪಿಸಿ ಕಳೆದ ಐದು ದಶಕಗಳಿಂದ ನಿರಂತರವಾಗಿ ನಾಡಿನಾದ್ಯಂತ ಸಾಹಿತ್ಯವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರಿದ್ದರು. ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿದ್ದರು ಎಂದು ನುಡಿನಮನವನ್ನು ಸಲ್ಲಿಸಿದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಇಬ್ರಾಹಿಂ ಸುತಾರ ಅವರು ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ವಿಶ್ವ ಪ್ರೇಮವನ್ನು ಬೆಳೆಸುವುದನ್ನೇ ತಮ್ಮ ಏಕೈಕ ಗುರಿಯಾಗಿರಿಸಿಕೊಂಡಿದ್ದರು. ನಾವು ನಂಬಿರುವ ಧರ್ಮವನ್ನು ಹಾಗೂ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಮತ್ತು ಅನುಷ್ಠಾನಕ್ಕೆ ತರುವುದು ಹಾಗೆಯೇ ಅನ್ಯ ಧರ್ಮಗಳನ್ನು ಪ್ರಾಮಾಣಿಕವಾಗಿ ಗೌರವಿಸುವುದು ಮತ್ತು ಅವುಗಳನ್ನು ಅಧ್ಯಯನ ಮಾಡುವುದೇ ನಿಜವಾದ ಭಾವೈಕ್ಯತೆ ಎಂದವರು ಸದಾ ಹೇಳುತ್ತಿದ್ದರು ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಮಾತನಾಡಿ, ಇಡೀ ದೇಶವೇ ಇಂದು ಜಾತಿ, ಮತ, ಪಂಥ, ತತ್ವವನ್ನು ಮೀರಿ ಲತಾ ಅವರಿಗೆ ಗೌರವವನ್ನು ಸಲ್ಲಿಸುತ್ತಿದೆ ಎಂದರೆ, ಅವರು ದೇಶಕ್ಕೆ ನೀಡಿರುವ ಕೊಡುಗೆ ಅರಿವಾಗುತ್ತದೆ. ಭಾರತ ಸರಕಾರವು ಸಂಗೀತ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು ಎಂದು ಆರಾಧ್ಯ ಅವರು ತಿಳಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ ಮಾತನಾಡಿ, ಲತಾ ಮಂಗೇಶ್ಕರ್ ಅವರು ಭಾರತೀಯ ಸಂಗೀತ ಲೋಕ ಕಂಡ ಅನುಪಮ ಗಾಯಕಿಯಾಗಿದ್ದರು. ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಲತಾ ಮಂಗೇಶ್ಕರ್ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಸುಮಾರು 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಭಾರತದ ನೈಟಿಂಗೇಲ್ ಎಂಬ ಅಭಿದಾನದೊಂದಿಗೆ ಏಳೂವರೆ ದಶಕಗಳ ಕಾಲ ಸಂಗೀತ ಲೋಕದ ಮಹಾರಾಣಿಯಾಗಿ ಮೆರೆದಾಡಿದರು. ಅವರು ಸಂತೋಷದ ಹಾಡನ್ನು ಹಾಡಿದಾಗ ನಮ್ಮನ್ನು ನಗಿಸಿ, ದುಃಖದ ಗೀತೆಯನ್ನು ಹಾಡುವಾಗ ನಮ್ಮನ್ನು ಅಳುವಂತೆ ಮಾಡುತ್ತಿದ್ದ ಅದ್ವಿತೀಯ ಪ್ರತಿಭಾನ್ವಿತ ಗಾಯಕಿಯಾಗಿದ್ದರು. ಲತಾ ಮಂಗೇಶ್ಕರ್ ಅವರ ಚಿತ್ರರಂಗದಲ್ಲಿನ ಸೇವೆಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಲಾಗಿತ್ತು. ಇದಲ್ಲದೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೂರು ಬಾರಿ ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡದಿದ್ದರು. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿದೆ. ಅವರು ಹಾಡಿದ ‘ಲಗ್ ಜಾ ಗಲೇ’, ‘ಯೇ ಗಲಿಯಾನ್ ಯೇ ಚೌಬಾರಾ’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಬಹೋನ್ ಮೇ ಚಲೇ ಆವೋ’, ‘ವೀರ್ ಜರಾ’ದ ‘ತೇರೆ ಲಿ’ ಮತ್ತು ಇನ್ನೂ ಅನೇಕ ಗೀತೆಗಳು ಈಗಲೂ ಸಂಗೀತ ಪ್ರಿಯರ ಹೃದಯದಲ್ಲಿ ಹಚ್ಚಹಸರಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಎಲ್.ನಾಗವೇಣಿ, ಪ್ರೊ.ದಾದಾಪೀರ್ ನವಿಲೇಹಾಳ್, ಪ್ರೊ.ಜಿ.ಬಿ.ಚಂದ್ರಶೇಖರಪ್ಪ, ಎಸ್.ಎಮ್.ಮಲ್ಲಮ್ಮ, ದಾಗಿನಕಟ್ಟೆ ಪರಮೇಶ್ವರಪ್ಪ ಮತ್ತಿತರರು ತಮ್ಮ ನುಡಿ ನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಲತಾ ಮಂಗೇಶ್ಕರ್ ಅವರು “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನ ಚಿತ್ರದಲ್ಲಿ ಹಾಡಿದ್ದ “ಬೆಳ್ಳನೆ ಬೆಳಗಾಯಿತು” ಹಾಡನ್ನು ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿ ಬಾಯಿ ಪುಟ್ಟ ನಾಯ್ಕ್ ಅವರು ಹಾಡುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಧನ್ಯವಾದ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿ ದಾಸರ ಯುವಸೇನೆ ರಾಜ್ಯ ಮಹಿಳಾಕಾರ್ಯಧ್ಯಕ್ಷರಾದ ಎಸ್ ಆರ್ ಇಂದಿರಾ ಗುರುಸ್ವಾಮಿ , ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯೆಪ್ಪ, ಕೆ.ವೀಣಾ, ಎಲ್.ನಾಗವೇಣಿ, ಪಾಲಾಕ್ಷಪ್ಪ ಗೋಪನಾಳ್, ಭೈರವೇಶ್ವರ, ಕಿರ್ಲೋಸ್ಕರ್ ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB