ಮಂಡ್ಯ: ಮಹಾವೀರ ವೃತ್ತದಲ್ಲಿ ಸಂಚಾರಿ ಪೊಲೀಸರೊಬ್ಬರು ಮಾನವೀಯತೆ ಮರೆತು ಚಿಕಿತ್ಸೆಗಾಗಿ ಹಸುಗೂಸನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದ ದಂಪತಿಗಳನ್ನು ತಡೆದು ಅಮಾನವೀಯವಾಗಿ ನಡೆದುಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಯಗಚೆ ಕುಪ್ಪೆ ಗ್ರಾಮದ ಅಭಿಷೇಕ್ ಮತ್ತು ಆತನ ಪತ್ನಿ ತಮ್ಮ 6–7 ತಿಂಗಳ ಹಸುಗೂಸನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದರು. ನಗರದ ಮಹಾವೀರ ವೃತ್ತಕ್ಕೆ ಬಂದ ಸಂದರ್ಭದಲ್ಲಿ ಸಂಚಾರಿ ಠಾಣೆಯ ಎಎಸ್ಐ ರಘುಪ್ರಕಾಶ್ ಎಂಬಾತ ಹೆಲ್ಮೆಟ್ ಇಲ್ಲದ ಕಾರಣಕ್ಕಾಗಿ ಅಭಿಷೇಕ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ಹೆಲ್ಮೆಟ್ ಧರಿಸದ ಕಾರಣ 500 ರೂಪಾಯಿ ದಂಡ ಕಟ್ಟಿ ಹೋಗುವಂತೆ ತಿಳಿಸಿದ್ದಾರೆ.
ಆಗ ಅಭಿಷೇಕ್ ನನ್ನ ಬಳಿ ಹಣವಿಲ್ಲ ಎಂದಾಗ ಬೈಕ್ ನ ಕೀ ಕಿತ್ತುಕೊಂಡು ದಂಡದ ಹಣ ಕಟ್ಟಿ ಬೈಕ್ ತೆಗೆದುಕೊಂಡು ಹೋಗು ಎಂದು ದರ್ಪದಿಂದ ಹೇಳಿದ್ದಾರೆ.
ಈ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಒಂದಿಬ್ಬರು ನಾಗರಿಕರು ಪಾಪ, ಅವರು ಕೆ.ಆರ್. ಪೇಟೆಯಿಂದ ಮಗು ತೋರಿಸಲು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಅವರ ಬಳಿ 500 ಹಣವಿಲ್ಲ ಎನ್ನುತ್ತಿದ್ದಾರೆ. ಮಾನವೀಯತೆಯಿಂದ ಬಿಟ್ಟು ಕಳುಹಿಸಿ ಎಂದು ಹೇಳಿದಾಗ ಸಂಚಾರಿ ಠಾಣೆ ಎಎಸ್ಐ ನಿಮಗೇಕೆ ಸುಮ್ಮನೆ ಹೋಗಿ ಎಂದು ಬೆನ್ನು ತಟ್ಟಿ ಅಹಂಕಾರದಿಂದ ತಿಳಿಸಿದ್ದಾರೆ.
ಕೊನೆಗೆ ಅಭಿಷೇಕ್ ಅವರು ಎಟಿಎಂಗೆ ಹೋಗಿ 500 ರೂಪಾಯಿ ಡ್ರಾ ಮಾಡಿ ದಂಡ ಕಟ್ಟಿದ ನಂತರ ಬೈಕ್ ಬಿಟ್ಟು ಕಳುಹಿಸಿದ್ದಾರೆ.
ಇದೆಲ್ಲ ಪ್ರಕರಣ ನಡೆಯುತ್ತಿದ್ದ 10–15 ನಿಮಿಷಗಳವರೆಗೂ ಅಭಿಷೇಕ್ ಅವರ ಪತ್ನಿ ತಮ್ಮ ಏಳು ತಿಂಗಳ ಹಸುಗೂಸಿನೊಂದಿಗೆ ರಸ್ತೆಯ ಫುಟ್ ಪಾತ್ ಪಕ್ಕದಲ್ಲಿ ಕುಳಿತು ಕಾಯುತ್ತಿದ್ದ ದೃಶ್ಯವನ್ನು ಕಂಡ ಜನರು ಪೊಲೀಸರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಂಡ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅವರಿಗೆ ವಿಷಯ ತಿಳಿದು ಅವರು ಕೂಡ ಸಂಚಾರಿ ಪೋಲಿಸರ ಈ ಅಮಾನವೀಯ ಘಟನೆಯನ್ನು ಖಂಡಿಸಿದ್ದಾರೆ.
ಆತ ಯಾವುದೇ ಗಂಭೀರ ಅಪರಾಧ ಮಾಡಿರಲಿಲ್ಲ. ಆದರೆ ಹೆಲ್ಮೆಟ್ ಹಾಕಿಲ್ಲದೆ ಸಂಚಾರ ಮಾಡಿದ್ದು ಕೂಡ ಅಪರಾಧ.ಅದರೆ ಅದನ್ನೇ ದೊಡ್ಡ ಮಹಾಪರಾಧ ಎಂಬಂತೆ ಮಂಡ್ಯ ಸಂಚಾರಿ ಪೊಲೀಸರು ಸ್ಥಳದಲ್ಲೇ ದಂಡ ಹಾಕಿಸುವ ಅಗತ್ಯವಿರಲಿಲ್ಲ. ಆತನ ಬಳಿ ಹಣವಿಲ್ಲ ಎಂದಾದಾಗ, ನ್ಯಾಯಾಲಯದಲ್ಲಿ ದಂಡಕಟ್ಟಲು ಅವಕಾಶವಿರುವಾಗ, ಆ ರೀತಿ ಮಾಡುವುದನ್ನು ಬಿಟ್ಟು ಬೈಕ್ ಕಿತ್ತುಕೊಂಡು ಎಟಿಎಂಗೆ ಕಳುಹಿಸಿದ್ದು ಮಾನವೀಯ ನಡೆಯಲ್ಲ.ಈ ಎಎಸ್ಐ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ರವರು ಕ್ರಮ ತೆಗೆದುಕೊಳ್ಳಬೇಕು. ಸಂಚಾರಿ ಪೊಲೀಸರ ಈ ಅಮಾನವೀಯ ನಡವಳಿಕೆಗೆ ಕಡಿವಾಣ ಹಾಕಬೇಕು. ಕನಿಷ್ಠ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿ: ಮಂಡ್ಯ ಶ್ರೀನಿವಾಸ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


