ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾರನ್ನು ಕೇಂದ್ರ ತನಿಖಾ ಸಂಸ್ಥೆಗಳು ಶೀಘ್ರವೇ ಬಂಧಿಸಲಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುನ್ಸೂಚನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಮೊದಲು ಆರೋಗ್ಯ, ವಿದ್ಯುತ್, ಗೃಹ ಖಾತೆಗಳನ್ನು ಹೊಂದಿದ್ದ ಸತ್ಯೇಂದ್ರಜೈನ್ ಅವರನ್ನು ನಕಲಿ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಅವರ ಬಂಧನದ ಬಗ್ಗೆ ಈ ಮೊದಲು ನನಗೆ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿತು. ಈಗ ಅದೇ ಮೂಲಗಳು ಸಿಸೋಡಿಯ ಬಂಧನದ ಬಗ್ಗೆಯೂ ಸುಳಿವು ನೀಡಿವೆ ಎಂದರು. ಸಿಸೋಡಿಯಾ ದೆಹಲಿಯ ಶಿಕ್ಷಣ ಚಳವಳಿಯ ಪಿತಾಮಹಾ.
ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಮಂತ್ರಿ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಭವಿಷ್ಯ ಸುಧಾರಣೆಗೆ ಕೆಲಸ ಮಾಡುತ್ತಿದ್ದಾರೆ. ದೆಹಲಿ ಮಾತ್ರವಲ್ಲದೆ ದೇಶಾದ್ಯಂತ ಇರುವ ಶಾಲೆಗಳಿಗೂ ಇದು ಸ್ಪೂರ್ತಿಯಾಗಿದೆ. ಅವರನ್ನು ಭ್ರಷ್ಟ ಎಂದು ಕರೆಯಲು ಸಾಧ್ಯವೆ ಎಂದು ಪ್ರಶ್ನಿಸಿದರು.
ಅಮ್‍ಆದ್ಮಿ ಪಕ್ಷದ ಶಾಸಕರು, ಸಚಿವರನ್ನು ಒಬ್ಬೊಬ್ಬರಾಗಿ ಬಂಧಿಸುವ ಬದಲು ಒಮ್ಮೆಲೆ ಎಲ್ಲರನ್ನೂ ಬಂಧಿಸಿ ಬಿಡಿ ಎಂದು ಪ್ರಧಾನಮಂತ್ರಿಯವರ ಬಳಿ ಒತ್ತಾಯಿಸುತ್ತೇನೆ. ಬಿಡುಗಡೆಯಾದ ಬಳಿಕವಾದರೂ ನಾವು ಒಳ್ಳೆಯ ಕೆಲಸವನ್ನು ಮುಂದುವರೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5