- ಶಿವಕುಮಾರ್, ಮೇಷ್ಟ್ರು ಮನೆ
ತುಮಕೂರು: ಮಳೆರಾಯನ ಕೃಪೆಯಿಂದ ಅದ್ಹೇಗೋ, ಕೆರೆತುಂಬಿತು, ಆದ್ರೆ, ತುಂಬಿದ ಕೆರೆಯನ್ನ ಇವರು ಹಾಗೆಯೇ ಇರಲು ಬಿಡ್ತಾರಾ? ಖಂಡಿತಾ ಇಲ್ಲ, ಆ ಕೆರೆ ಈಗ ತ್ಯಾಜ್ಯ ಸುರಿಯುವ, ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ.
ಹೌದು…! ಇಂತಹದ್ದೊಂದು ಅನಾಗರಿಕ ಕೃತ್ಯ ನಡೆದಿರುವುದು ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಮರಳೂರು ಗ್ರಾಮಕ್ಕೆ ಸೇರಿದ ಮರಳೂರು ಕೆರೆಯಲ್ಲಿ. ಈ ಬಾರಿ ವರುಣನ ಕೃಪೆಯಿಂದಾಗಿ ಇಡೀ ಜಿಲ್ಲೆಯ ಕೆರೆಗಳು ತುಂಬಿ ಕೋಡಿ ಹರಿದಿತ್ತು. ಜನಪ್ರತಿನಿಧಿಗಳು ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ್ದರು. ಆದರೆ, ಮಳೆ ನೀರನ್ನು ಉಳಿಸುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನತೆ ಯೋಚನೆ ಮಾಡದಿರುವುದು ವಿಪರ್ಯಾಸವಾಗಿದೆ.
ಮಳೆಗಾಲದಲ್ಲಿ ತುಂಬಿದ್ದ ಮರಳೂರು ಕೆರೆ ಇದೀಗ ಸತ್ತ ಕೋಳಿ, ಪ್ರಾಣಿಗಳ ತ್ಯಾಜ್ಯಗಳನ್ನು ಎಸೆಯಲು ಬಳಕೆಯಾಗುತ್ತಿದೆ. ಕೆರೆಯಲ್ಲಿರುವ ಶುದ್ಧ ನೀರು ಪ್ರತಿ ದಿನ ಸುರಿಯುತ್ತಿರುವ ತ್ಯಾಜ್ಯಗಳಿಂದಾಗಿ ಕಲುಶಿತಗೊಳ್ಳುತ್ತಿದೆ. ಇದರಿಂದಾಗಿ ಕೆರೆಯಲ್ಲಿರುವ ಜಲಚರ ಜೀವಿಗಳು ಸಾಯುತ್ತಿವೆ, ಅಂತರ್ಜಲ ಮಾಲಿನ್ಯವಾಗುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಮರಳೂರು ಗ್ರಾಮದ ಬೋರ್ ವೆಲ್ ಗಳಿಗೆ ಈ ಕೆರೆಯ ನೀರಿನ ಸಂಪರ್ಕವಿದೆ. ಕೆರೆಯ ನೀರು ಅಪಾಯಕಾರಿ ಮಟ್ಟಕ್ಕೆ ಕಲುಶಿತಗೊಂಡರೆ, ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡಲು ಇದು ಕಾರಣವಾಗಬಹುದು.
ಛೆ…! ಇವರೆಂಥಾ ಜನ? ಇವರಿಗೆ ತ್ಯಾಜ್ಯ ಎಸೆಯಲು ಜೀವ ಜಲವಿರುವ ಇದೇ ಕೆರೆ ಬೇಕೆ? ತ್ಯಾಜ್ಯ ವಿಲೇವಾರಿಗೆ ಇವರಿಗೆ ಬೇರೆ ಯಾವುದೇ ಸ್ಥಳವಿಲ್ಲವೇ? ಶುದ್ಧ ನೀರಿಗೆ ತ್ಯಾಜ್ಯ ಸುರಿಯುವ ಇವರೆಷ್ಟು ನೀಚರು ಇರಬಹುದು? ಕಳೆದ 20 ವರ್ಷಗಳ ನಂತರ ಮರಳೂರು ಕೆರೆ ತುಂಬಿತ್ತು, ಆದ್ರೆ ಇದೀಗ ಈ ಕೆರೆ ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ತುಮಕೂರು ನಗರಕ್ಕೆ ಹೊಂದಿಕೊಂಡಂತಿರುವ ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆರೆ ದಿನದಿಂದ ದಿನಕ್ಕೆ ಕಲುಶಿತಗೊಳ್ಳುತ್ತಿದೆ. ಕೆರೆಯ ಸಮೀಪ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದ್ದರೂ, ಜವಾಬ್ದಾಯುತ ಸ್ಥಾನದಲ್ಲಿರುವ ಗ್ರಾಮಸ್ಥರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಇದೇ ಪರಿಸರದಲ್ಲಿ ದಿನನಿತ್ಯ ಓಡಾಡುತ್ತಿರುವ ಜವಾಬ್ದಾರಿಯುತ ಜನಪ್ರತಿನಿಧಿಗಳು ಈ ದುಷ್ಕೃತ್ಯವನ್ನು ಕಂಡೂ ಕಾಣದಂತೆ ಕುಳಿತಿರುವುದು ವಿಪರ್ಯಾಸವಾಗಿದೆ.
ಮರುಕಳಿಸದಿರಲಿ ದುರಂತ!
ಈ ಹಿಂದೆ ಸಿದ್ಧಾರ್ಥ ಕಾಲೇಜಿನ ಹಿಂಭಾಗದಲ್ಲಿ ಇದೇ ರೀತಿಯಾಗಿ ಕೋಳಿ ತ್ಯಾಜ್ಯವನ್ನು ಎಸೆಯಲಾಗಿತ್ತು. ಈ ವೇಳೆ ನೂರಾರು ಹದ್ದುಗಳು ಈ ತ್ಯಾಜ್ಯವನ್ನು ತಿಂದು ಸಾವನ್ನಪ್ಪಿದ್ದವು. ಆದರೆ, ಈ ಬಾರಿ ನೇರವಾಗಿ ಜನರ ಜೀವವೇ ಅಪಾಯದಲ್ಲಿದ್ದು, ಜನರು ದಿನನಿತ್ಯ ಬಳಸುತ್ತಿರುವ ನೀರಿಗೆ ತ್ಯಾಜ್ಯ ಸುರಿಯಲಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಜಿಲ್ಲಾಡಳಿತ, ಸ್ಥಳೀಯಾಡಳಿತ ಈ ಬಗ್ಗೆ ತಕ್ಷಣವೇ ಗಮನ ಹರಿಸಬೇಕಿದೆ. ಕೆರೆಯ ನೀರಿಗೆ ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಜೊತೆಗೆ ಕೆರೆಯ ನೀರಿನ ಸುರಕ್ಷಯ ಬಗ್ಗೆ ಗಮನ ಹರಿಸಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1