ತುರುವೇಕೆರೆ: ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಹೊಸ ಸರ್ಕಾರ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆನೆಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಮಸಾಲ ಜಯರಾಮ್ ಜೊತೆಗೂಡಿ ರೋಡ್ ಶೋ ನಡೆಸಿ ಬಿರುಸಿನ ಪ್ರಚಾರ ಕೈಗೊಂಡು. ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ ಅವರು, ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಮತದಾರನ್ನುದ್ದೇಶಿಸಿ ಮಾತನಾಡಿದರು.
ಹೊಸ ಸರ್ಕಾರದಲ್ಲಿ ಜಯರಾಮಣ್ಣ ಶಾಸಕರಾಗಿ ಆರಿಸಿ ಬರುವ ವಿಶ್ವಾಸವಿದೆ. ನೀವು ಸಂಕಲ್ಪ ಮಾಡಬೇಕು, ಕಮಲದ ಗುರುತಿಗೆ ಆಶೀರ್ವಾದ ಮಾಡುವ ಮುಖಾಂತರ ಜಯರಾಮಣ್ಣನನ್ನು ವಿಧಾನಸೌಧಕ್ಕೆ ಕಳಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕಳೆದ 5 ವರ್ಷಗಳಲ್ಲಿ ಶಾಸಕರಾಗಿ 1,600 ಕೋಟಿ ರೂಗಳ ಅನುದಾನ ತಂದು ಹಳ್ಳಿಹಳ್ಳಿಗಳನ್ನು ಅಭಿವೃದ್ಧಿ ಮಾಡಿರುವ ಜಯರಾಮಣ್ಣ , ಶಾಲಾ ಕೊಠಡಿ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಸಹಕಾರ ಕೊಟ್ಟಿದ್ದಾರೆ. ಕೆರೆಗಳನ್ನು ತುಂಬಿಸಿರುವ ಇವರು ನಿಮ್ಮ ಮನೆಯ ಮಗನಾಗಿ ಬಂದಿದ್ದಾರೆ ಎಂದರು.
ದೇಶದಲ್ಲಿ ಪರಿವರ್ತನೆಯ ಯುಗ ಪ್ರಾರಂಭವಾಗಿದೆ. ಒಂದು ಕಾಲಘಟ್ಟದಲ್ಲಿ ಈ ದೇಶ ಅಯೋಧ್ಯೆಯ ಶ್ರೀರಾಮಚಂದ್ರನ ಮಂದಿರಕ್ಕೆ ಹೋರಾಟ, ಬಲಿದಾನ ಮಾಡುವಂತಹ ಪರಿಸ್ಥಿತಿ ಬಂದಿತ್ತು. ಈಗ ಮೋದಿಯವರಿಂದ ಎಲ್ಲವೂ ಬದಲಾಗಿದೆ. 24 ನೇ ಇಸವಿಯ ಹೊತ್ತಿಗೆ ಶ್ರೀರಾಮ ಗರ್ಭಗುಡಿಯಲ್ಲಿರುತ್ತಾರೆ ಎಂದರು.
ಮನೆ ಮನೆಗೆ ಬಿಜೆಪಿ ಹಾಲು ಕೊಡುತ್ತದೆ. ಆದರೆ ಕಾಂಗ್ರೆಸ್ ವಿಷ ಕೊಡುತ್ತದೆ. ನಿಮಗೆ ಯಾವ ಪಾರ್ಟಿಬೇಕು ಯೋಚಿಸಿ.ಗೋಹತ್ಯೆ ಕಾಯಿದೆ, ಪಿಎಫ್ ಐ ನಿಷೇಧವನ್ನು ಪಾಪಸ್ ಪಡೆಯುತ್ತೇವೆ ಹಾಗೂ ಬಜರಂಗ ದಳವನ್ನು ನಿಷೇಧ ಮಾಡಿ ಅದರ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ನಿಮಗೆ ಇಂತಹ ಪಾರ್ಟಿ ಬೇಕಾ ?ಯೋಚನೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಮಸಾಲ ಜಯರಾಮ್, ಸಂಸದ ಪ್ರಸಿದ್ದಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಬ್ಯಾಲಹಳ್ಳಿ ಸೋಮಣ್ಣ, ವಕೀಲ ಮುದ್ದೇಗೌಡ, ಬಸವೇಶ್, ಸೋಮೇನಹಳ್ಳಿ ಜಗದೀಶ್, ವಿ.ಟಿ. ವೆಂಕಟರಾಂ, ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಲಿ ಸದಸ್ಯ ಟಿ.ಕೆ.ಚಿದಾನಂದ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy