ಹರಿಹರ: ಪಂಚಮಸಾಲಿ ಸಮಾಜದವರು ಮತಾಂತರ ಆಗುತ್ತಿದ್ದಾರೆ. ಆದಕಾರಣ ಧಾರ್ಮಿಕವಾಗಿ ಸಂಘಟನೆಯ ಮೂಲಕ ಸಮಾಜದಲ್ಲಿ ಮತಾಂತರ ಕಾರ್ಯ ನಿಲ್ಲಬೇಕು ಎಂದು ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ಪಂಚಮಸಾಲಿ ಮಠದಲ್ಲಿ ಮೂರನೇ ಮಠ ಸ್ಥಾಪನೆ ವಿಚಾರದ ಗೊಂದಲದ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ನಾಡಿನಲ್ಲಿ ಪಂಚಮಸಾಲಿ ಮಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭೀತಿ ನಮಗೆ ಇಲ್ಲ. ಮಠಗಳು ಹೆಚ್ಚಾದರೆ ನಮ್ಮ ಸಮಾಜ ಹೆಚ್ಚು ಸಂಘಟನೆಯಾಗುತ್ತದೆ ಎಂದರು.
ಹರಿಹರ ತಾಲೂಕಿನಲ್ಲಿರುವ ಪಂಚಮಸಾಲಿ ಪೀಠವು 20 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದೆ. ಈ ಹಿಂದೆ ಮಠಕ್ಕೆ ಭೇಟಿ ನೀಡಿದ್ದ ವೀರಶೈವ ಪಂಚಮಸಾಲಿ ಒಕ್ಕೂಟದ ಪದಾಧಿಕಾರಿಗಳು, ಪಂಚಮಸಾಲಿ ಸಮಾಜದ ಮೂಲ ಪೀಠ ಎಂದರೆ ಅದು ಹರಿಹರದ ಪಂಚಮಸಾಲಿ ಪೀಠ ಎಂದು ತಿಳಿಸಿದ್ದಾರೆ. ಮೂರನೆ ಪೀಠದ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದರು, ನಾವು ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದರು.
ಮೂರನೇ ಪೀಠದ ನಿರ್ಮಾಣಕ್ಕೆ ನಾವು ಸಹಕಾರ ಕೊಡುತ್ತೇವೆ, ನಮ್ಮ ಸಮಾಜಕ್ಕೆ ಪ್ರತಿ ಜಿಲ್ಲೆಗೊಂದು ಪೀಠಗಳಾಗಲಿ ಭಯವಿಲ್ಲ. ಪೀಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭೀತಿ ನಮಗಿಲ್ಲ. ಮೂರನೇ ಪೀಠದ ಬಗ್ಗೆ ಕೆಲವರು ಗೊಂದಲಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ನಿರಾಣಿಯವರು ಎಂದಿಗೂ ಪೀಠಗಳನ್ನು ಬಳಸಿಕೊಂಡಿಲ್ಲ, ಪೀಠಗಳೇ ನಿರಾಣಿಯವರನ್ನು ಉಪಯೋಗಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ವಚನಾನಂದ ಶ್ರೀ ವಾಗ್ದಾಳಿ ನಡೆಸಿದರು.
ಮುರಗೇಶ್ ನಿರಾಣಿಯವರು ತಮ್ಮ ಸ್ವಾರ್ಥಕ್ಕಾಗಿ ಪೀಠಗಳನ್ನು ಬಳಸಿಲ್ಲ. ನಮ್ಮ ಸಮಾಜದ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಸುಖಾಸುಮ್ಮನೆ ನಿರಾಣಿಯವರ ಮೇಲೆ ಆರೋಪ ಸರಿಯಲ್ಲ. ಇನ್ನು ಪಾದಯಾತ್ರೆ ಹೋರಾಟ ಮಾಡಿದ್ದೇವೆ ಅಂತ ಪದೇ ಪದೇ ನಾವು ಹೇಳಿಲ್ಲ. ನಾವು ಈಗಾಗಲೇ ಮೀಸಲಾತಿ ಬಗ್ಗೆ ನ್ಯಾಯಬದ್ದವಾಗಿ ಹೋರಾಟ ಮಾಡುತ್ತಿದ್ದೇವೆ. ಸಮಾಜಕ್ಕೋಸ್ಕರ ಹೋರಾಟ ಮಾಡುವುದು ಅವರ ಕರ್ತವ್ಯ ಎಂದು ಕಿಡಿಕಾರಿದರು.
ಸುತ್ತು ಕಟ್ಟು ಸಮಾಜ ಎನ್ನುವ ಸಂದೇಶದಿಂದ ಎಲ್ಲಾರೂ ಸೇರಿ ಸಮಾಜ ಸಂಘಟನೆ ಮಾಡುತ್ತೇವೆ. ಒಕ್ಕೂಟು ಕೇಳಿದ್ದಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಬಸವರಾಜ್ ದಿಂಡೂರು ಮಾತನಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಪಂಚಮಸಾಲಿ ಸಂಘ 20 ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಹೇಳುತ್ತಿದ್ದಾರೆ ಅವರಿಗೆ ತಾಕ್ಕತ್ತು ಇದ್ದರೆ ಅದನ್ನು ಸಾಭೀತ ಮಾಡಲಿ. 2030ರ ಇಸವಿ ಒಳಗೆ ನಾಡಿನಲ್ಲಿ 15 ಮಠಗಳು ಸ್ಥಾಪನೆಯಾಗಲಿವೆ. ಜನರ ಭಕ್ತಿ ಭಾವನೆಗೆ ಮೂರನೇ ಮಠ ಸ್ಥಾಪನೆಯಾಗುವುದು ಬೇಡ ಎನ್ನುವುದಕ್ಕೆ ನಾವ್ಯಾರು. ಮಠಗಳು ಹೆಚ್ಚಾಗುವುದರಿಂದ ನಮ್ಮ ಸಮಾಜ ಸಧೃಡವಾಗಲಿದೆ ಎಂದು ಹೇಳಿದರು.
ಪಂಚಮಸಾಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಮುರುಗಾ ಶ್ರೀಗಳ ಕುತಂತ್ರದಿಂದ ರಾಜ್ಯದಲ್ಲಿ ಕೂಡಲ ಸಂಗಮ ಮಠ ಸ್ಥಾಪನೆಯಾಯಿತು. ಆ ಸಂದರ್ಭದಲ್ಲಿ ಜಯಮೃತ್ಯುಂಜಯ ಶ್ರೀಗಳನ್ನು ಪೀಠಾಧಿಪತಿ ಮಾಡಲು ಸೂಚಿಸುವಂತೆ ನನಗೆ ೯೦ ಎಕ್ಕರೆ ಜಮೀನನ್ನು ಆಮಿಷವಾಗಿ ಹೊಡ್ಡಿದ್ದರು. ನಾನು ಅದಕ್ಕೆ ಮನ್ನಣೆ ನೀಡಲಿಲ್ಲ. ಮೀಸಲಾತಿ ಹೋರಾಟ 1996 ರಲ್ಲಿಯೇ ಪ್ರಾರಂಭವಾಯಿತು. ಅನೇಕ ಹೋರಾಟಗಳನ್ನು ಅಂದಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು. ಈ ವೇಳೆ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಹಾಗೂ ಮತ್ತಿತರರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy