ಧಾರವಾಡ: ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಬಳಿ ಕಾರೊಂದು ಪಲ್ಟಿಯಾಗಿ ವೈದ್ಯಕೀಯ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. ದೀಪಕ್ (30) ಮೃತ ವೈದ್ಯಕೀಯ ವಿದ್ಯಾರ್ಥಿ.
ಮುಮ್ಮಿಗಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ತಿರುವು ಕೊಡಲಾಗಿತ್ತು. ಆದರೆ, ತಿರುವು ನೀಡಿದ್ದು ಗೊತ್ತಾಗದೆ ಕಾರು ಹಿಂದಿನ ರಸ್ತೆಯಲ್ಲೇ ಚಲಿಸಿ ಪಲ್ಟಿಯಾಗಿದೆ. ಅಡ್ಡಾದಿಡ್ಡಿ ಚಲಿಸಿದ ಕಾರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ವೇಳೆ ರಸ್ತೆಯ ಅಂಚಿಗೆ ಸಿಲುಕಿ ಪಲ್ಟಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್ (30) ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ವಿನಯ ಎಂಬವರಿಗೆ ಸಹ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


