ಬೆಂಗಳೂರು: ವಿಕಲಚೇತನರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ; ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಎಲ್ಲರಿಗೂ ಎಲ್ಲ ರೀತಿಯ ಅನುಕೂಲ ಕಲ್ಪಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಕಂಠೀರವ ಒಳಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶಾಲಯ ವತಿಯಿಂದ ಅಯೋಜಿಸಿದ್ದ ವಿಕಲಚೇತನ ದಿನಾಚರಣೆ– 2024, ಆರೈಕೆದಾರರಿಗೆ ಮಾಸಿಕ ಭತ್ಯೆ ಯೋಜನೆಗೆ ಚಾಲನೆ ಹಾಗೂ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೈಕೆದಾರರಿಗೆ ಮಾಸಾಶನ ದೇಶದಲ್ಲೇ ಮೊದಲು:
ವಿಕಲಚೇತನರು ಸಮಾಜದಲ್ಲಿ ಎಂದೂ ಶಕ್ತಿಹೀನರಲ್ಲ, ಶಕ್ತಿವಂತರು. ವಿಕಲಚೇತನರ ಬಗ್ಗೆ ಅಷ್ಟೆ ಅಲ್ಲ. ಅವರನ್ನು ನೋಡಿಕೊಳ್ಳುವ ಆರೈಕೆದಾರರ ಬಗ್ಗೆಯೂ ಸರ್ಕಾರ ವಿಶೇಷ ಕಾಳಜಿ ಹೊಂದಿದೆ. ಆರೈಕೆದಾರರಿಗೆ ಒಂದು ಸಾವಿರ ರೂಪಾಯಿ ಮಾಸಾಶನ ನೀಡಲು ತೀರ್ಮಾನಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ವಿಕಲಚೇತನರ ಆರೈಕೆದಾರರಿಗೆ ಮಾಸಾಸನ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದರು.
ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತರಿದ್ದಾರೆ, ಅವರನ್ನು ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ. ಅದರಂತೆ ಎಲ್ಲಾ ಕ್ಷೇತ್ರದಲ್ಲಿ ವಿಕಲಚೇತನರು ಭಾಗವಹಿಸುವ , ಉದ್ಯೋಗ ಪಡೆಯುವುದಕ್ಕೆ ಸಂವಿಧಾನಬದ್ಧ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಮಾಜಕ್ಕೆ ದೊಡ್ಡ ಆಸ್ತಿ:
ವಿಕಲಚೇತನರು ಸಮಾಜಕ್ಕೆ ಎಂದೂ ಹೊರೆಯಲ್ಲ; ಅವರೆಲ್ಲರೂ ಸಮಾಜದ ಆಸ್ತಿ. ಎಲ್ಲ ಕ್ಷೇತ್ರಗಳಲ್ಳೂ ಸಾಧನೆ ಮಾಡುತ್ತಿದ್ದಾರೆ. ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ನಡೆದ ಒಲಂಪಿಕ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಬಂದಿದ್ದು ಪ್ಯಾರಾ ಒಲಂಪಿಕ್ ನಲ್ಲಿ. ಎಂದೂ ಅವರನ್ನು ಅಶಕ್ತರು, ಶಕ್ತಿಹೀನರೆಂದು ಹೇಳುವುದಕ್ಕೆ ಆಗುವುದಿಲ್ಲ. ಸಮಾಜಕ್ಕೂ ಎಂದೂ ಭಾರವಲ್ಲ; ಯಾವುದೇ ಹುದ್ದೆಗೂ ಅನರ್ಹರಲ್ಲ.
ಅನುದಾನ ಖೋತಾ ಇಲ್ಲ:
ವಿಕಲಚೇತನರ ಉದ್ಯೋಗಾವಕಾಶಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗಿದೆ. ಬಜೆಟ್ ನಲ್ಲಿ ವಿಕಲಚೇತನರ ಅಭ್ಯುದಯಕ್ಕಾಗಿ 64 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ. ಆ ಅನುದಾನವನ್ನು ಯಾವುದೇ ಕಾರಣಕ್ಕೂ ಖೋತಾ ಮಾಡುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಮರಣ ಪರಿಹಾರ ನಿಧಿ ಹೆಚ್ಚಳ:
ಪ್ರಸಕ್ತ ಸಾಲಿನಲ್ಲಿ ಬುದ್ಧಿಮಾಂಧ್ಯ ಮತ್ತು ಶ್ರವಣದೋಷವುಳ್ಳರಿಗೆ ಹೊಸದಾಗಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಈ ವರ್ಷ 13 ವಸತಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ವಿಕಲಚೇತನರ ಮರಣ ಪರಿಹಾರ ನಿಧಿಯನ್ನು 50 ಸಾವಿರದಿಂದ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಕಲಚೇತನರಿಗೆ ಇಲಾಖೆಯ ಮೂಲಕ ಸಹಾಯಧನ ನೀಡಲಾಗುತ್ತಿದೆ. ಶೇ.40ರಷ್ಟು ಅಂಗವೈಕಲತೆ ಹೊಂದಿರುವವರಿಗೆ ವಿಕಲಚೇತನರಿಗೆ ತಿಂಗಳಿಗೆ 800 ರೂಪಾಯಿ, ಶೇ. 75ಕ್ಕಿಂತ ಹೆಚ್ಚಿರುವವರಿಗೆ ಒಂದು ಸಾವಿರದ 400 ರೂಪಾಯಿ ಸಹಾಯ ಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ವಿಕಲಚೇತರಿಗೆ ಬರೀ 800 ರೂಪಾಯಿ ಸಹಾಯ ಧನ ನೀಡಲಾಗುತ್ತಿದೆ. ಅದನ್ನು ಹೆಚ್ಚಳ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿಯವರು ಇದೇ ವೇಳೆ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx