ಕೋಲ್ಕತ್ತ: ಪಶ್ಚಿಮ ಬಂಗಾಳದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ವಿದ್ಯಾರ್ಥಿನಿ ಸಾವನ್ನು ಕೊಲೆ ಎಂದು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿತ್ತು. ಇದಾದ ಬೆನ್ನಲ್ಲೇ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿತು. ಜತೆಗೆ ಬುಧವಾರ (ಆ. 14)ರೊಳಗಾಗಿ ಪ್ರಕರಣ ಕುರಿತ ಎಲ್ಲಾ ದಾಖಲೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಪೊಲೀಸ್ಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೋಲ್ಕತ್ತ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಘಟನೆ ನಡೆದ ನಂತರ ತಕ್ಷಣ ದೂರು ದಾಖಲಾಗದ ಕಾರಣ, ಇದೊಂದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸರ್ಕಾರ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ವಿದ್ಯಾರ್ಥಿನಿಯ ಮೃತ ದೇಹ ರಸ್ತೆಯಲ್ಲಿ ದೊರೆತಿಲ್ಲ. ಕಾಲೇಜಿನ ಪ್ರಾಚಾರ್ಯ ಅಥವಾ ಸೂಪರಿಂಟೆಂಡೆಂಟ್ ಅವರು ದೂರು ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟಿತು.
ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಪ್ರಕರಣ ಸಂಬಂಧ ಆರೋಪಿ ಸಂಜಯ್ ರಾಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಆತನನ್ನು, ಆಗಸ್ಟ್ 23ರವರೆಗೆ ಪೊಲೀಸರ ವಶಕ್ಕೆ ನೀಡಿದೆ. ಈ ನಡುವೆ ಸಿಬಿಐಗೆ ಪ್ರಕರಣದ ತನಿಖೆಯನ್ನು ವರ್ಗಾಯಿಸಲು ನ್ಯಾಯಾಲಯ ಆದೇಶಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296