ವಿವಿಧ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಸಂಬಂಧ ನಗರದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ವಿದೇಶಿಗರು ಕೂಡ ಹೃದಯ ಸಂಬಂಧಿ ಸಮಸ್ಯೆ, ಮೂಳೆ ಮುರಿತ, ಮೂತ್ರಪಿಂಡ ಸಮಸ್ಯೆಯಂತಹ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದ್ದಾರೆ. ಇದರಿಂದಾಗಿ ವೈದ್ಯರ ಪ್ರಕಾರ ಆಸ್ಪತ್ರೆಗಳ ಆದಾಯದಲ್ಲಿಯೂ ಶೇ 30 ರಷ್ಟು ಹೆಚ್ಚಳವಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಇಲ್ಲಿನ ಆಸ್ಪತ್ರೆಗಳು ಕೂಡ ಕಾರಣ. ಇಲ್ಲಿನ ವೈದ್ಯಕೀಯ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಇದರಿಂದಾಗಿ ಹೊರ ರಾಜ್ಯದ ಜತೆಗೆ ಹೊರ ದೇಶದಿಂದಲೂ ರೋಗಿಗಳು ಶಸ್ತ್ರಚಿಕಿತ್ಸೆಗಳಿಗೆ ಬರುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿನ ಬಹುತೇಕ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ರೋಬೋಟಿಕ್ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡುತ್ತಿವೆ. ಇದರಿಂದಾಗಿ ರೋಗಿಗಳ ಚಿಕಿತ್ಸಾ ಅವಧಿ ಕಡಿತವಾಗುತ್ತಿದ್ದು, ಬೇಗ ಚೇತರಿಸಿಕೊಳ್ಳುತ್ತಿದ್ದಾರೆ.
2020ರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ ಪರಿಣಾಮ ವಿದೇಶಿ ರೋಗಿಗಳಿಗೆ ಚಿಕಿತ್ಸೆ ಪಡೆಯಲು ನಗರಕ್ಕೆ ಬರಲು ತೊಡಕುಗಳು ಎದುರಾಗಿದ್ದವು. ಎರಡು ವರ್ಷಗಳ ನಂತರ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ವಿದೇಶಿ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಪ್ರಕಾರ ಕಳೆದೊಂದು ವರ್ಷದಲ್ಲಿ 50 ಸಾವಿರಕ್ಕೂ ಅಧಿಕ ವಿದೇಶಿಗರು ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ವರ್ಷ 1, 608 ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2020ರಲ್ಲಿ 798 ಹಾಗೂ 2021ರಲ್ಲಿ 1, 352 ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದೇ ರೀತಿ, ಕಳೆದ ವರ್ಷ 894 ಹೃದಯದ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ಸಂಖ್ಯೆ 2020ರಲ್ಲಿ 403 ಹಾಗೂ 2021ರಲ್ಲಿ 846 ಇದೆ. 2020ರಲ್ಲಿ 1927 ಇದ್ದ ಹೃದಯ ಶಸ್ತ್ರಚಿಕಿತ್ಸೆ, 2022ರಲ್ಲಿ 4, 586ಕ್ಕೆ ತಲುಪಿದೆ. ಯುರೋಪಿನ ಹಾರ್ಟ್ ಜರ್ನಲ್ ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ‘ವಿಶ್ವದ ಶ್ರೇಷ್ಠ ಹೃದಯ ಕೇಂದ್ರ’ ಎಂದು ಬಣ್ಣಿಸಿ, ಅಮೆರಿಕದ ಪ್ರಜೆಯೊಬ್ಬರು 10 ವರ್ಷಗಳ ಹಿಂದೆ ಕೇವಲ 7 92 ಚಿಕಿತ್ಸಾ ವೆಚ್ಚ ಪಾವತಿಸಿದ್ದನ್ನು ಉಲ್ಲೇಖಿಸಿತ್ತು.
ಕ್ಯಾನ್ಸರ್ ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಆಫ್ರಿಕಾ ದೇಶಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿದ್ದಾರೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸರ್ಜಿಕಲ್ ಆಂಕೊಲಾಜಿ ವಿಭಾಗವು 2021ರಲ್ಲಿ 2, 164 ಶಸ್ತ್ರಚಿಕಿತ್ಸೆಗಳನ್ನು ನಡೆಸಿತ್ತು. ಕಳೆದ ವರ್ಷ ಈ ಸಂಖ್ಯೆ ಮೂರು ಸಾವಿರದ ಗಡಿ ದಾಟಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ 2021ರಲ್ಲಿ 273 ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. 2022ರಲ್ಲಿ ಇದು 300ರ ಗಡಿ ದಾಟಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 45ರಿಂದ 50 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಅಪೋಲೋ ಆಸ್ಪತ್ರೆಯಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶಸ್ತ್ರಚಿಕಿತ್ಸೆಗಳು ಈ ವರ್ಷ ಶೇ 30ರಷ್ಟು ಹೆಚ್ಚಳವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


