ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ಜ.4ರಂದು ಚಿಕ್ಕನಾಯಕನಹಳ್ಳಿ ಸೇರಿದಂತೆ ತಿಪಟೂರು, ತುರುವೇಕೆರೆ, ತಿಪಟೂರು ನಾಲ್ಕು ತಾಲ್ಲೂಕಿನ ಮುಖಂಡರುಗಳ ಸಭೆ ನಡೆಯಲಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ಪ್ರವಾಸಿ ಮಂದಿರ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಳೆಗಾಲದಲ್ಲಿ ನೀರು ಸಮುದ್ರ ಪಾಲಾಗುತ್ತಿತ್ತು, ನೀರಾವರಿ ತಜ್ಞರಿಂದ ಸರ್ವೆ ನಡೆಸಿ ಆ ನೀರನ್ನು ಜನರ ಅನುಕೂಲತೆ ದೃಷ್ಟಿಯಿಂದ ನಮ್ಮ ಸರ್ಕಾರ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿತು ಎಂದರು.
ಕಾಮಗಾರಿ ಕೆಲಸ 252 ಕಿ.ಮೀ ಪೈಕಿ 208 ಕಿ.ಮೀ. ಉದ್ದದಷ್ಟು ಆಗಿದೆ. 23,252 ಕೋಟಿಯಷ್ಟು ರಾಜ್ಯ ಸರ್ಕಾರದ ಅನುದಾನವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಅನುದಾನ ನೀಡದಿದ್ದರೂ ಕಾಮಗಾರಿಗೆ ಅರಸೀಕೆರೆ ತಾಲ್ಲೂಕಿನ ಅರಣ್ಯ ಪ್ರದೇಶದ ಕೇವಲ 4 ಕುಂಟೆ ನೆಪ ಒಡ್ಡಿ ಕೆಲಸಕ್ಕೆ ಅಡಚಣೆ ಮಾಡಿದೆ. ಜ.4ರಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಭೆ ಸೇರಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ನೀರಾವರಿ ಯೋಜನೆ ಪೂರ್ಣವಾದರೆ ರೈತರ ಬದುಕು ಹಸನಾಗುತ್ತದೆ. ನಮ್ಮ ಕ್ಷೇತ್ರದ ರೈತರ ಜಮೀನಿನಲ್ಲೂ ಅಂತರ್ಜಲ ವೃದ್ಧಿಯಾಗುತ್ತದೆ. ನಾವೇನಾದರೂ ಉದಾಸೀನತೆಯಿಂದ ಮೈ ಮರೆತರೆ ಯೋಜನೆ ಕೆಲಸ ಮೂಲೆ ಹಿಡಿಯುತ್ತದೆ. ಸಣ್ಣ ವಿಚಾರಕ್ಕೆ ಬೃಹತ್ ಯೋಜನೆಗೆ ತೊಡಕಾಗಿರುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಾದರೆ ನೀರಾವರಿ ಹೋರಾಟಗಾರರಾದ ನಾವುಗಳು ಸದಾ ಸಿದ್ಧವಾಗಿರಬೇಕೆಂದರು.
ಈ ಯೋಜನೆಯಲ್ಲಿ ತುಮಕೂರು ಜಿಲ್ಲೆಯ 113 ಕೆರೆಗಳಿಗೆ ನೀರು ಪೂರೈಕೆಯಾಗುವುದು. ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಿಗೂ ಯೋಜನೆ ಜೀವನಾಡಿಯಾಗಿದೆ. ಚಿಕ್ಕನಾಯಕನಹಳ್ಳಿ ಸೇರಿದಂತೆ ತಿಪಟೂರು, ತುರುವೇಕೆರೆ, ತಿಪಟೂರು ತಾಲ್ಲೂಕುಗಳ ಎಲ್ಲಾ ರೈತ ಸಂಘ ಸಂಸ್ಥೆಯ ಮುಖಂಡರುಗಳೊಂದಿಗೆ ಮಹತ್ವದ ಸಭೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕೆ.ಬಿ.ಕ್ರಾಸ್ ಹತ್ತಿರದ ಟೋಲ್ ಸಮೀಪವಿರುವ ನಾಲಾ ಕಾಮಗಾರಿ ಸ್ಥಳಕ್ಕೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಗಮಿಸಬೇಕಾಗಿ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಬೋಕ್ಕಣ್ಣ, ಹೇಮಾವತಿ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಬೇವಿನಹಳ್ಳಿ ಚನ್ನಬಸವಯ್ಯ, ಆಟೋ ಚಾಲಕ ಸಂಘದ ಅಧ್ಯಕ್ಷ ಮಂಜು, ಮಣೇಧೇರ್, ಮುಖಂಡರುಗಳಾದ ಪದಾಕರಿ, ವಿನಯ್ ಸಿಎಂಎನ್ ಮಾತನಾಡಿದರು. ಕಾಂಗ್ರೆಸ್ ಸೇವಾದಳದ ಕೆ.ಜಿ.ಕೃಷ್ಣಗೌಡ, ನಿಶಾನಿ ಕಿರಣ್ ಮುಂತಾದವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


