ಕೊರಟಗೆರೆ : ಬೀದಿ ಬದಿ ವ್ಯಾಪಾರಿಗಳು ಸುರಕ್ಷಿತ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡದೇ ನಡು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದ ವೇಳೆ ವಾಹನಗಳಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ದ ಪ.ಪಂ. ಸದಸ್ಯರು ಸೋಮವಾರ ಸಾಮಾನ್ಯ ಸಭೆಯಲ್ಲಿ ಅಸಾಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತ್ತು.
ಪ.ಪಂ ಅಧ್ಯಕ್ಷೆ ಅನಿತಾ ನೇತೃತ್ವದಲ್ಲಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಂಜಾನೆ 5 ರಿಂದಲೇ ಪೋಸ್ಟ್ ಆಫೀಸ್ ಹತ್ತಿರ ನಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರದ ವಹಿವಾಟುವಿನಲ್ಲಿ ತೊಡಗಿದ್ದು, ಖಾಸಗಿ ಬಸ್ ಗಳು ನಗರದೊಳಗೆ ವೇಗವಾಗಿ ಸಂಚರಿಸುವುದರಿಂದ ರಸ್ತೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ನೋವುಂಟಾದರೆ ಹೊಣೆ ಯಾರು? ಇದಕ್ಕೆ ಪ.ಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸುರಕ್ಷಿತ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿ ಮುಂದೆ ನಡೆಯುವ ದುರಂತವನ್ನು ತಪ್ಪಿಸುವಂತೆ ಒತ್ತಾಯ ಮಾಡಿದರು.
ಬೀದಿ ನಾಯಿಗಳ ಶಾಸ್ತ್ರ ಚಿಕಿತ್ಸೆಗೆ ಚಿಂತನೆ:
ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಬಲಿಯಾಗುತ್ತಿರುವ ಪ್ರಕರಣಗಳ ಸಂಖೈ ದಿನನಿತ್ಯ ವಾಹಿನಿಗಳಲ್ಲಿ ನೋಡುತ್ತಿದ್ದೇವೆ, ಸರ್ವೋಚ್ಚ ನ್ಯಾಯಾಲಯ ಆದೇಶದ ಮೇರೆಗೆ ಮತ್ತು ಪ್ರಾಣ ದಯ ಸಂಘದ ಜೊತೆ ಚರ್ಚಿಸಿ ಬೀದಿ ನಾಯಿಗಳಿಗೆ ಹಿಂಸಿಸದೆ ಸಂತಾನ ಹರಣಕ್ಕೆ ಶಾಸ್ತ್ರ ಚಿಕಿತ್ಸೆ ಮಾಡಿ ಸಾರ್ವಜನಿಕರು ಬೀದಿ ನಾಯಿಗಳ ಹಾವಳಿಗೆ ಬಲಿಯಾಗದಂತೆ ಜಾಗೃತಿ ವಹಿಸುವ ಉದ್ದೇಶದ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದ್ದು ಸದಸ್ಯರು ಕೂಡ ಈ ಚಿಂತನೆಗೆ ಸಾಥ್ ನೀಡಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ಮಾಹೆಯ ಜಮಾ ಮತ್ತು ಖರ್ಚುಗಳು, ಪ.ಜಾತಿ/ಪ.ಪಂಗಡ ಸಮುದಾಯಕ್ಕೆ ಎಸ್ ಎಫ್ ಸಿ ಅನುದಾನದಡಿ ವೈಯಕ್ತಿಕ ಶೌಚಾಲಯ ನಿರ್ಮಿಸುವ ಕ್ರಿಯಾ ಯೋಜನೆ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಉಸ್ನಾಫಾರಿಯಾ, ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಓಬಳರಾಜು, ಲಕ್ಷ್ಮಿನಾರಾಯಣ್, ಎ.ಡಿ.ಬಲರಾಮಯ್ಯ, ನಟರಾಜ್ ಕೆ.ಎನ್., ನಂದೀಶ್, ಭಾರತಿ ಸಿದ್ದಮಲ್ಲಪ್ಪ, ಭಾಗ್ಯಮ್ಮ, ಕಾವ್ಯಶ್ರೀ, ಪುಟ್ಟನರಸಪ್ಪ, ನಾಗರಾಜು, ನಾಮಿನಿ ಸದಸ್ಯರಾದ ಮಂಜುಳಾ ಗೋವಿಂದರಾಜು, ಫಯಾಜ್ ಅಹಮದ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದುಶ್ಚಟಕ್ಕೆ ಬಲಿಯಾಗುತ್ತಿರುವ ಯುವಕರು..!
ಕೊರಟಗೆರೆ ರಾಜಕೀಯ ನಾಯಕರ ಬಲದಿಂದ ಪಟ್ಟಣದ ಹಲವು ವೈನ್ಸ್ ಮಾಲೀಕರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಣದ ಅಮಿಷವೊಡ್ಡಿ ಮುಂಜಾನೆಯಿಂದಲೇ ತೆರೆಮರೆಯಲ್ಲಿ ಅಕ್ರಮವಾಗಿ ಮದ್ಯಪಾನ ವಿತರಣೆ ಮಾಡುತ್ತಿದ್ದು, ಇತ್ತೀಚಿಗೆ ಪಟ್ಟಣದ ಬಡ ಯುವಕನೊಬ್ಬ ಅತಿಯಾದ ಮದ್ಯಪಾನ ಸೇವನೆಯಿಂದ ಮೃತಪಟ್ಟಿದ್ದಾನೆ. ಇದೇ ರೀತಿ ನೂರಾರು ಮಂದಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಪ.ಪಂ. ಅಧಿಕಾರಿಗಳು ನೋಟಿಸ್ ನೀಡಿದ್ದರು, ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸದ ಕಾರಣ ಈ ಅಕ್ರಮ ಮದ್ಯಮಾರಾಟ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕೊಳಚೆ ಮಂಡಳಿ ಎಂದು ಹೆಸರಿಡಿ..!
ಪ.ಪಂಚಾಯಿತಿ ಕಡು ಬಡುವರಿಗೆ ಸೂರು ಕಲ್ಪಿಸುವ ಭರವಸೆ ನೀಡಿ 500 ರೂ. ಹಣ ಪಡೆದ ಅರ್ಜಿ ನೀಡಿ ಫಲಾನುಭವಿಗಳಿಗೆ ರಶೀದಿ ನೀಡಿದೆ. ಚುನಾವಣೆಯಲ್ಲಿ ನಿರಾಶ್ರಿತರಿಗೆ ಸೂರು ಕಲ್ಪಿಸುವ ಭರವಸೆ ನೀಡಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ, ಅಧಿಕಾರವೇ ಮುಗಿಯುತ್ತಾ ಬಂದರೂ ಇಲ್ಲಿಯವರೆಗೂ ಕಾಮೇನಹಳ್ಳಿ ಬಳಿ ಸೂರು ವಂಚಿತರಿಗಗೆಂದು ಗುರುತಿಸಿದ ಸ್ಥಳವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವಲ್ಲಿ ಪ.ಪಂ. ವಿಫಲವಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ಹೆಸರು ತೆಗೆದು ಕೊಳಚೆ ಮಂಡಳಿ ಎಂದು ಹೆಸರಿಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸದಸ್ಯ ನಟರಾಜ್ ಧ್ವನಿ ಎತ್ತಿ ಅಸಾಮಾಧಾನ ವ್ಯಕ್ತಪಡಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
		
					
					


