ಬೆಂಗಳೂರು: ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಹಾಲಿ ಶಾಸಕರೂ ಆಗಿದ್ದ ಹೆಚ್.ವೈ.ಮೇಟಿಯವರು ಇಂದು 12.30 ಗೆ ನಿಧನರಾಗಿದ್ದಾರೆ. ನಾನು ಮೂರು ದಿನಗಳ ಹಿಂದೆ ಮೇಟಿಯವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದೆ. ವೈದ್ಯರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಆದರೆ ಮೇಟಿಯವರು ಇಷ್ಟುಬೇಗ ಇಹಲೋಕ ತ್ಯಜಿಸುತ್ತಾರೆಂದು ಭಾವಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹೆಚ್.ವೈ.ಮೇಟಿಯವರ ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೇಟಿಯವರು ಅತ್ಯಂತ ನಿಷ್ಠಾವಂತ ರಾಜಕಾರಣಿಯಾಗಿದ್ದು, ನನಗೆ ಅತ್ಯಂತ ಆಪ್ತರಾಗಿದ್ದರು. ಮೇಟಿಯವರು ಅರಣ್ಯ ಸಚಿವರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೂಲತ: ಕೃಷಿಕರಾಗಿದ್ದ ಮೇಟಿಯವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜನಪರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದ ಮೇಟಿಯವರು ಮಂತ್ರಿಯಾಗಿರಲಿ, ಸಂಸದರಾಗಿ, ಶಾಸಕರಾಗಿರಲಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತಹ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಜನರೊಂದಿಗಿನ ಒಡನಾಟ ಹಾಗೂ ಜನಪ್ರಿಯತೆಯಿಂದ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅಂತಹ ನಿಷ್ಠಾವಂತ ನಾಯಕನೊಬ್ಬನ ಸಾವು ದು:ಖ ತಂದಿದ್ದು, ಇದರಿಂದ ನನಗೆ ವೈಯಕ್ತಿಕ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಅಭಿಮಾನಗಳಿಗೂ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇಂದು ಸಂಜೆಯ ತನಕ ಬೆಂಗಳೂರಿನ ಕುಟುಂಬದವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಿ, ನಂತರ ಬಾಗಲಕೋಟೆಗೆ ಸ್ಥಳಾಂತರಿಸಲಾಗುವುದು. ನಾಳೆ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಮೇಟಿಯವರ ಅಂತ್ಯಕ್ರಿಯೆ ನಡೆಯಲಿದ್ದು, ನಾನು ಸಹ ಪಾಲ್ಗೊಳ್ಳಲಿದ್ದೇನೆ ಎಂದು ಅವರು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


