ಗುಬ್ಬಿ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಕ್ಷಣದ ತುರ್ತು ಕ್ರಮಗಳ ಜೊತೆಗೆ ಬೇಸಿಗೆಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಚಿಕ್ಕಹಳ್ಳಿ, ವಿರೂಪಾಕ್ಷಪುರ, ಎಂ.ಎನ್.ಕೋಟೆ ಹಾಗೂ ಅಲ್ಲುಘಟ್ಟ ಗ್ರಾಮಗಳಲ್ಲಿ ಒಟ್ಟು 5.30 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಡಲಗೆರೆ ಗೊಲ್ಲರಹಟ್ಟಿ ಹಾಗೂ ಕೊಂಡ್ಲಿ ಕ್ರಾಸ್ನಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬೇಸಿಗೆಯಲ್ಲಿ ನೀರು ಮತ್ತು ವಿದ್ಯುತ್ ಅಭಾವ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಬೋಗಸಂದ್ರ, ಎಂಬಿಬಿ ಕಾವಲ್, ತೊರೆಹಳ್ಳಿ ಸೇರಿದಂತೆ ಹಲವೆಡೆ ಹೊಸ ವಿದ್ಯುತ್ ಸರಬರಾಜು ಉಪಘಟಕಗಳ ಕಾಮಗಾರಿ ನಡೆಯುತ್ತಿದೆ. ಗುಬ್ಬಿಯಲ್ಲಿ 130 ಕೋಟಿ ರೂ. ವೆಚ್ಚದ 220 ಕೆವಿ ಸ್ಟೇಷನ್ ಕೆಲಸ ಪ್ರಗತಿಯಲ್ಲಿದೆ ಎಂದರು.
ಇನ್ನೂ, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಮನೆ ಮನೆಗೆ ನೀರು ಒದಗಿಸುವ ಕೆಲಸಗಳು ಅರ್ಧಕ್ಕೆ ನಿಂತಿರುವುದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಶಾಸಕರು ಆರೋಪಿಸಿದರು, ಈ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 10 ಸಾವಿರ ಕೋಟಿ ರೂ. ಬಾಕಿ ನೀಡಬೇಕಿದೆ. ಕೇಂದ್ರ ಮತ್ತು ರಾಜ್ಯ ತಲಾ ಶೇ. 37.50 ರಷ್ಟು ಅನುದಾನ ನೀಡಬೇಕಿದ್ದು, ಕೇಂದ್ರದ ಪಾಲು ಬಾರದ ಕಾರಣ ಕಾಮಗಾರಿಗಳು ವಿಳಂಬವಾಗಿವೆ” ಎಂದು ಅವರು ದೂರಿದರು.
ಹಾಗಲವಾಡಿ ಹೋಬಳಿಯಲ್ಲಿ ಅಂತರ್ಜಲ ವೃದ್ಧಿಗಾಗಿ ಸರ್ಕಾರಿ ಜಮೀನು ಹಾಗೂ ರೈತರ ಜಮೀನುಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುರೇಣುಕಾರಾಧ್ಯ, ಸಣ್ಣರಂಗಯ್ಯ, ಪುಟ್ಟರಾಜು, ತಿಮ್ಮಪ್ಪಾಳ್ಯ ಶಶಿಧರ್ ಸೇರಿದಂತೆ ಎಂ.ಎನ್.ಕೋಟೆಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


