ನಾಪತ್ತೆಯಾಗಿದ್ದ ಖ್ಯಾತ ಮಾಡೆಲ್ ದಿವ್ಯಾ ಪಹುಜಾ ಕೊಲೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗುರುಗ್ರಾಮ್ ನ ಹೋಟೆಲ್ ಕೋಣೆಯಿಂದ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವ ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ. ಆದರೆ ಮೃತದೇಹ ಹಾಗೂ ಆರೋಪಿಗಳ ಪತ್ತೆ ಇನ್ನೂ ಸಾಧ್ಯವಾಗಿಲ್ಲ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಜನವರಿ 22 ರಂದು ದೆಹಲಿಯ ಉದ್ಯಮಿ ದಿವ್ಯಾ ಪಹುಜಾ ಮತ್ತು ಗುರುಗ್ರಾಮ್ ನ ಹೋಟೆಲ್ ಮಾಲೀಕ ಅಭಿಜಿತ್ ಸಿಂಗ್ ಇತರ ಇಬ್ಬರೊಂದಿಗೆ ಹೋಟೆಲ್ ಗೆ ಹೋಗಿ ಕೊಠಡಿ ತೆಗೆದುಕೊಂಡಿದ್ದರು. ಕೊಠಡಿ ಸಂಖ್ಯೆ 111ಕ್ಕೆ ಹೋದಾಗಲೂ ಅಭಿಜಿತ್ ಜತೆಗಿದ್ದರು.
ಸ್ವಲ್ಪ ಹೊತ್ತಿನ ನಂತರ ದಿವ್ಯಾ ಪಹುಜಾಳ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ನೆಲದಿಂದ ಎಳೆದು ಹೊರಗೆ ತೆಗೆದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ. ಈ ದೃಶ್ಯಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಕೊಲೆಯ ಹಿಂದೆ ಅಭಿಜಿತ್ ಸಿಂಗ್ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವನ್ನು ಹೊಟೇಲ್ ನಿಂದ ಹೊರತೆಗೆಯಲು ಅಭಿಜಿತ್ ತನ್ನ ಜೊತೆಗಿದ್ದವರಿಗೆ ಹತ್ತು ಲಕ್ಷ ರೂಪಾಯಿಯನ್ನೂ ಕೊಟ್ಟಿದ್ದಾನೆ. ಈ ದೃಶ್ಯಾವಳಿಗಳು ಹೊರಬಿದ್ದಿದ್ದರೂ ದಿವ್ಯಾ ಪಹುಜಾ ಅವರ ಮೃತದೇಹ ಎಲ್ಲಿದೆ, ಆರೋಪಿಗಳ ಪತ್ತೆಗೆ ಪೊಲೀಸರಿಗೆ ಸಾಧ್ಯವಾಗಿಲ್ಲ.
ದರೋಡೆಕೋರ ಸಂದೀಪ್ ಗಡೋಲಿಯ ವಿವಾದಿತ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ರೂಪದರ್ಶಿ ದಿವ್ಯಾ ಪಹುಜಾ ಆರೋಪಿಯಾಗಿದ್ದರು. ಏಳು ವರ್ಷಗಳ ಜೈಲಿನಲ್ಲಿ ಕಳೆದ ನಂತರ ಪಹುಜಾ ಜೂನ್ 2023 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ದಿವ್ಯಾ ಹತ್ಯೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


