ಕುಣಿಗಲ್: ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ ನೀವುಗಳು ಕಾಟಾಚಾರಕ್ಕೆ ಯೋಜನೆಗಳನ್ನು ತಯಾರು ಮಾಡಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದೀರಿ, ಇದು ನನಗೆ ಸರಿ ಅನಿಸುತ್ತಿಲ್ಲ ಎಂದು ಶಾಸಕ ಡಾ. ಹೆಚ್.ಡಿ. ರಂಗನಾಥ್ ಇಇ ಪಂಪಾಪತಿ ಅವರಿಗೆ ಸೂಚಿಸಿದರು.
ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ಗ್ರಾಮದಿಂದ ಶೆಟ್ಟಗೆರೆ ಗ್ರಾಮದವರೆಗೆ ಡಾಂಬರೀಕರಣ ರಸ್ತೆ ಕಾಮಗಾರಿಗೆ 4.50 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸೀನಪ್ಪನಹಳ್ಳಿ ಹೊಸಕೆರೆ ಬಳಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ 12.50 ಕೋಟಿ ವೆಚ್ಚದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ದಶಕಗಳ ಹಿಂದೆ ಅಂದಿನ ಸಚಿವರಾದ ಡಿ.ಎನ್. ಹುಚ್ಚಮಾಸ್ತಿಗೌಡ ಅವರು ಕಾಡೋರನಹಳ್ಳಿ ಗ್ರಾಮದಿಂದ ಮಾಗಡಿ ತಾಲೂಕು ಸಂಪರ್ಕಿಸಲು ಬಂಡಿ ಜಾಡು ರಸ್ತೆ ನಿರ್ಮಾಣ ಮಾಡಿಸಿದ್ದರು. ಈ ಭಾಗದಲ್ಲಿ ಉತ್ತಮ ರಸ್ತೆ ಆಗದೆ ತಮಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ನನ್ನಲ್ಲಿ ಕೋರಿದ್ದರು. ಆದ್ದರಿಂದ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಮೂರು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಕಾಡೋರನಹಳ್ಳಿ ಮತ್ತು ಸುತ್ತ ಮುತ್ತಲ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದರು.
12.50 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ವಿದ್ಯಾರ್ಥಿಗಳ ವಸತಿ ನಿಲಯ, ಶಿಕ್ಷಕರ ವಸತಿ ಗೃಹ, ಕ್ರೀಡಾಂಗಣ, ಕಾಂಪೌಂಡ್, ಸಭಾಂಗಣ ನಿರ್ಮಾಣದ ಸಮರ್ಪಕ ಯೋಜನೆ ನಕ್ಷೆ ಸಿದ್ಧಪಡಿಸಿಕೊಳ್ಳದೆ, ಸಭಾಂಗಣಕ್ಕೆ ಕೇವಲ 30 ಅಡಿ ಜಾಗ ಮೀಸಲಿಟ್ಟು ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸಿರುವುದಕ್ಕೆ ಇಇ ಪಂಪಾಪತಿ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಹೊಸದಾಗಿ ಯೋಜನಾ ನಕ್ಷೆ ತಯಾರು ಮಾಡಿ ನನ್ನ ಗಮನಕ್ಕೆ ತಂದ ಬಳಿಕ ಕಾಮಗಾರಿ ಪ್ರಾರಂಭಿಸಿ ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಾಡೋರನಹಳ್ಳಿ ಗ್ರಾಮದಿಂದ ಮಾಗಡಿ ಗಡಿ ಸಂಪರ್ಕಿಸುವ ಮೂರು ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಹೆಚ್.ಡಿ. ರಂಗನಾಥ್ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಡೋರನಹಳ್ಳಿ ಗ್ರಾಮದ ಜನರ ಹಲವು ದಶಕದ ಕನಸು ನನಸು ಮಾಡಿದ್ದಾರೆ. ಕನಿಷ್ಠ ಹತ್ತು ವರ್ಷಗಳ ಕಾಲ ಬಳಕೆಗೆ ಬರುವಂಥ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ರಾಮಕೃಷ್ಣ, ಎಇ ರಾಜಣ್ಣ, ತಾ.ಪಂ ಮಾಜಿ ಸದಸ್ಯ ಕುಮಾರ್, ಮುಖಂಡರಾದ ಕೋಘಟ್ಟರಾಜಣ್ಣ, ಬೋರೇಗೌಡ, ಸುಂದರಕುಪ್ಪೆ ಪಾಪಣ್ಣ, ಶಿವರಾಮಯ್ಯ, ಎಸ್.ಕೆ. ನಾಗೇಂದ್ರ, ಗುತ್ತಿಗೆದಾರ ಲಕ್ಷ್ಮಣ್‌ಗೌಡ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


