ರಾಮನಗರ: ರಾಮಮಂದಿರ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಆದರೂ ರಾಜಕೀಯ ಉದ್ದೇಶದಿಂದ ಉದ್ಘಾಟನೆ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ? ಅವರು (ಬಿಜೆಪಿ) ಮನೆಮನೆಗೆ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ಕೊಡುತ್ತಿದ್ದೇವೆ. ಯಾರಿಗೆ ಮತ ಹಾಕಬೇಕೆಂದು ಜನ ತೀರ್ಮಾನಿಸುತ್ತಾರೆ. ಮಂತ್ರಾಕ್ಷತೆ ಕೊಟ್ಟವರಿಗಾ ಅಥವಾ ಎರಡು ಸಾವಿರ ರೂ. ಕೊಟ್ಟವರಿಗಾ? ಎಂಬುವುದನ್ನು ಜನ ನಿರ್ಧರಿಸುತ್ತಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ಕಟ್ಟಲು ನಾವೂ ಜಾಗ ಹುಡುಕುತ್ತಿದ್ದೇವೆ. 20 ಎಕರೆ ಜಾಗದಲ್ಲಿ ಮಂದಿರ ಕಟ್ಟುತ್ತೇವೆ. ರಾಮಮಂದಿರ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತೇವೆ. ರಾಮಮಂದಿರ ಬಿಜೆಪಿ, ಕಾಂಗ್ರೆಸ್ ಸ್ವತ್ತಲ್ಲ. ರಾಮಮಂದಿರ ಈ ಸಮಾಜದ ಸ್ವತ್ತು. ನಾವು ರಾಮಮಂದಿರ ಬಗ್ಗೆ ನಾವು ಚರ್ಚೆ ಮಾಡಲ್ಲ. ಮಂದಿರ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಜಿಲ್ಲಾಧಿಕಾರಿ, ಸಂಸದರು ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಹೆಚ್ಚು ಚರ್ಚೆ ಮಾಡದೇ ರಾಮಮಂದಿರ ನಿರ್ಮಿಸುತ್ತೇವೆ. ಇಲ್ಲದಿದ್ದರೇ ಮಂದಿರ ಕಟ್ಟಿದ್ದೇವೆಂದು ಗೆದ್ದು ಬಿಡುತ್ತಾರೆ.ಕೆಲಸ ಮಾಡದೇ ಮತ ಹಾಕಿಸಿಕೊಂಡು ಗೆದ್ದುಬಿಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ವಿಚಾರವಾಗಿ ಮಾತನಾಡಿದ ಅವರು, ಈ ಹೇಳಿಕೆ ನೀಡುತ್ತಿರುವವರಿಗೆ ಲೋಕಸಭಾ ಚುನಾವಣೆ ಟಾಸ್ಕ್ ನೀಡಬೇಕು. ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟವರು ಎರಡೆರಡು ಕ್ಷೇತ್ರ ಗೆಲ್ಲಿಸಿಕೊಡಲಿ. ಎರಡೆರಡು ಕ್ಷೇತ್ರ ಗೆಲ್ಲಿಸಿ ಕೊಡುವವರನ್ನು ಡಿಸಿಎಂ ಮಾಡೋಣ. ಜಾತಿ ಹೆಸರಿನಲ್ಲಿ ಡಿಸಿಎಂ ಮಾಡಿ ಅನ್ನೋದು ಸರಿಯಲ್ಲ. ಆದರೆ ಕೆಲ ಸಚಿವರು ಅನವಶ್ಯಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಬೇಕಿದ್ದರೆ ಹೈಕಮಾಂಡ್ ಭೇಟಿಯಾಗಿ ಮನವಿ ಮಾಡಿಕೊಳ್ಳಲಿ. ಮಾಧ್ಯಮಗಳ ಮುಂದೆ ಮಾತನಾಡಿ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸ್ವಪಕ್ಷೀಯ ಸಚಿವರ ಹೇಳಿಕೆಗೆ ಶಾಸಕ ಹೆಚ್. ಸಿ. ಬಾಲಕೃಷ್ಣ ಟಾಂಗ್ ಕೊಟ್ಟರು.


