ಬಳ್ಳಾರಿ: ನಗರದಲ್ಲಿರುವ ಮಾಡೆಲ್ ಹೌಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿಲ್ಲ, ಬದಲಾಗಿ ಭಯದ ವಾತಾವರಣ ಸೃಷ್ಟಿಸಲು ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಬಗ್ಗೆ ಪೊಲೀಸರು ನೀಡುತ್ತಿರುವ ವಿವರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ಅಂಶಗಳು ಇಲ್ಲಿವೆ:
ಪೊಲೀಸ್ ತನಿಖೆಗೆ ಆಕ್ಷೇಪ: ಎಸ್ಪಿ ಅವರು ಕೆಳಹಂತದ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯ ಆಧಾರದ ಮೇಲೆ ತರಾತುರಿಯಲ್ಲಿ ಹೇಳಿಕೆ ನೀಡಿದ್ದಾರೆ. ಬೆಂಕಿ ಹಚ್ಚಿದ್ದನ್ನು ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಕಣ್ಣಾರೆ ನೋಡಿದ್ದಾರೆ. ಆದರೆ ಪೊಲೀಸರು ಇದು ‘ರೀಲ್ಸ್’ ಮಾಡುವಾಗ ನಡೆದ ಅವಘಡ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ರೆಡ್ಡಿ ಟೀಕಿಸಿದರು.
ಸಿಬಿಐ ತನಿಖೆಗೆ ಒತ್ತಾಯ: ಈ ಪ್ರಕರಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಸಿ ಬೆಂಕಿ ಹಚ್ಚಲಾಗಿದೆ. ಸಿಗರೇಟ್‌ನಿಂದ ಬೆಂಕಿ ಹತ್ತಿಕೊಂಡಿದೆ ಎಂಬುದು ಸುಳ್ಳು. ಈ ಪ್ರಕರಣವನ್ನು ಮಂಗಳವಾರ ಸದನದಲ್ಲಿ ಪ್ರಸ್ತಾಪಿಸಿ ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಶಾಸಕ ಭರತ್ ರೆಡ್ಡಿ ವಿರುದ್ಧ ಆರೋಪ: ಶಾಸಕ ಭರತ್ ರೆಡ್ಡಿ ಅವರು ಗಾಂಜಾ ಪೆಡ್ಲರ್ ‘ದೌಲ’ ಎಂಬಾತನಿಗೆ ರಕ್ಷಣೆ ನೀಡುತ್ತಿದ್ದಾರೆ. ಬಳ್ಳಾರಿಯ ಪ್ರತಿ ವಾರ್ಡ್‌ಗಳಿಗೂ ಗಾಂಜಾ ಸರಬರಾಜು ಮಾಡಲು ಭರತ್ ರೆಡ್ಡಿ ಸಾಥ್ ನೀಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.
ಅಧಿಕಾರಿಗಳ ವರ್ಗಾವಣೆಗೆ ಆಗ್ರಹ: ಘಟನೆ ನಡೆದು ಹಲವು ದಿನಗಳಾದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಎಎಸ್ ಪಿ ಮತ್ತು ಡಿವೈಎಸ್ ಪಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬ್ಯಾನರ್ ಗಲಾಟೆ ಮತ್ತು ಮಾಡೆಲ್ ಹೌಸ್ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ ರೆಡ್ಡಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


