ಆಧುನಿಕ ಜೀವನ ವಿಘಟಿತವಾಗಿ ಸಣ್ಣ ಕಥೆಗಳಾಗಿವೆ. ಈ ವೇಳೆ ಜೀವನವನ್ನು ಸಮಗ್ರವಾಗಿ ನೋಡಲು ಕಾದಂಬರಿ ಮೊರೆ ಹೋಗಲಾಗುತ್ತಿದೆ ಎಂದು ಕಾದಂಬರಿಕಾರ ಶ್ರೀಧರ ಬಳಗಾರ ತಿಳಿಸಿದರು.
ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಬಿಡುಗಡೆಮಾಡಿ ಅವರು ಮಾತನಾಡಿದರು.
ಲೌಕಿಕ ಜಗತ್ತಿನಲ್ಲಿ ಕಾಲ್ಪನಿಕವಾದಂತಹ ಅವಕಾಶಗಳನ್ನು ನೀಡುತ್ತಿರುವುದು ಕಾದಂಬರಿ. ಯಾವುದನ್ನು ಕಾರ್ಪೋರೇಟ್ ಜಗತ್ತು ಅಂತ ಕರೆಯುತ್ತೆವೆಯೋ, ಅದು ನಮ್ಮ ಅಂತಃಕರಣದ ಮಾಹಿತಿ ನಾಶ ಮಾಡುತ್ತದೆ. ಅಂತಃಕರಣದ ಮನುಷ್ಯತ್ವ ಹುಡುಕುವ ಪ್ರಯತ್ನವನ್ನು ಕಾದಂಬರಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾದಂಬರಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ’ ಎಂದು ಹೇಳಿದರು.
ಕಿರುತೆರೆ ನಟಿ ರಂಜನಿ ರಾಘವನ್, ‘ಅತ್ತುತ್ತಮ ಕಾದಂಬರಿಯ ಓದು ಹೊಸ ಜೀವನ ಬದುಕಿ ಬಂದಂತೆ ಅನಿಸುತ್ತದೆ. ಕಾದಂಬರಿ ಅಥವಾ ಕತೆಯನ್ನು ನಾವು ಹೀಗೆಯೇ ಬರೆಯಬೇಕು ಅಂದುಕೊಂಡರೆ ಬರೆಯುತ್ತಾ ಹೋದಂತೆ ಅದರ ಸ್ವರೂಪವೇ ಬದಲಾಗುತ್ತದೆ’ ಎಂದರು.
ಕೃತಿಯ ಬಗ್ಗೆ ಮಾತನಾಡಿದ ವಿಮರ್ಶಕಿ ಎಂ. ಎಸ್. ಆಶಾದೇವಿ,
‘ಕೃತಿಗೆ ಕಾಲದ ನೆಲೆ ಹಾಗೂ ಕಾಲದ ಚಲನೆಯಿದೆ. ತನ್ನ ಕಾಲವನ್ನು ಅರ್ಥಮಾಡಿಸಿಕೊಳ್ಳುವುದರ ಜೊತೆಗೆ ಕಾಲವನ್ನು ಶೋಧಿಸುವ ಪರಿ ಇಲ್ಲಿ ಕಂಡಿದೆ. ಬದುಕು ಅನ್ನುವುದು ಕಾದು ಗೆಲ್ಲಬೇಕಾದ ಯುದ್ದವೋ ಅಥವಾ ನಿರ್ವಹಿಸಬೇಕಾದ ಅಮೀಷವೋ ಅನ್ನುವುದುನ್ನು ಈ ಕಾದಂಬರಿ ಪ್ರಶ್ನಿಸುತ್ತದೆ’ ಎಂದರು.
ಲೇಖಕ ಸತೀಶ್ ಚಪ್ಪರಿಕೆ, ‘ಏಳು ವರ್ಷಗಳ ಮಾನಸಿಕ ತೊಳಲಾಟದ ಬಂಧನ ಈ ಕಾದಂಬರಿ. ಮನುಷ್ಯ ಹಾಗೂ ಮನುಷತ್ವದ ನಡುವೆ ನಡೆಯುವ ಪಯಣ ಈ ಒಂದು ಜೀವನ. ಹಲವಾರು ಆಯಾಮಗಳಲ್ಲಿ ಈ ಕೃತಿಯು ಕವಲೊಡೆದಿದೆ’ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


