ಶಿವಸೇನಾ ಶಾಸಕ ಹಾಗೂ ಉದ್ಧವ್ ಠಾಕ್ರೆ ಅವರ ಆಪ್ತ ರವೀಂದ್ರ ವೈಕರ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಮುಂಬೈನಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ಕಡೆಯ ಶಿವಸೇನೆ ಶಾಸಕರ ಅನರ್ಹತೆ ಪ್ರಕರಣದ ಫಲಿತಾಂಶ ನಾಳೆ ಹೊರಬೀಳಲಿರುವಾಗಲೇ ಈ ದಾಳಿ ನಡೆದಿರುವುದು ಗಮನಾರ್ಹ.
ಮಂಗಳವಾರ ಬೆಳಗ್ಗೆ ರವೀಂದ್ರ ವೈಕರ್ ಮನೆ ಮೇಲೆ ಇಡಿ ತಂಡ ದಾಳಿ ನಡೆಸಿತ್ತು. ಜೋಗೇಶ್ವರಿಯ ನಿವಾಸ, ಕಚೇರಿ, ಮಾತೋಶ್ರೀ ಕ್ಲಬ್ ಸೇರಿದಂತೆ ಏಳು ಕಡೆ ಶೋಧ ನಡೆಸಲಾಗಿದೆ. ವ್ಯಾಪಾರ ಪಾಲುದಾರರ ಆವರಣದ ಮೇಲೂ ದಾಳಿ ನಡೆಸಲಾಗಿದೆ. ಮುಂಬೈ ಮಹಾನಗರ ಪಾಲಿಕೆಯ ಜಮೀನನ್ನು ದುರ್ಬಳಕೆ ಮಾಡಿಕೊಂಡು ಅಲ್ಲಿ ಐಷಾರಾಮಿ ಹೋಟೆಲ್ ಮತ್ತು ಕ್ಲಬ್ ಸ್ಥಾಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ರವೀಂದ್ರ ವೈಕರ್ ಮುಂಬೈನ ಜೋಗೇಶ್ವರಿ ಕ್ಷೇತ್ರದ ಶಾಸಕರಾಗಿದ್ದಾರೆ. ಹಲವು ವರ್ಷಗಳ ಕಾಲ ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ವೈಕರ್ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರು.


