ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಬೀಜ ದಿನ – 2023’ ಉದ್ಘಾಟಿಸಿ ಮಾತನಾಡಿದ ಅವರು ಬಿತ್ತನೆ ಬೀಜಗಳನ್ನು ಉತ್ಪಾದಿಸುವತ್ತ ಹೆಚ್ಚಿನ ನಿಗಾ ವಹಿಸುವಂತೆ ಕೃಷಿ ಸಚಿವ ಎನ್. ಚಲುವರಾಯ ಸೂಚಿಸಿದ್ದಾರೆ.
ಹೆಚ್ಚು ಇಳುವರಿ ನೀಡುವ ಹಾಗೂ ಹೊಸ ತಳಿಗಳನ್ನು ಸಂಶೋಧಿಸಿ ರೈತರಿಗೆ ತಲುಪಿಸಬೇಕು. ಹೊಸ ತಾಂತ್ರಿಕತೆಯನ್ನು ರೈತಾಪಿ ವರ್ಗಕ್ಕೆ ವರ್ಗಾಯಿಸಬೇಕು. ರೈತರು ಹೆಚ್ಚು ಶ್ರಮವಹಿಸಿ ದುಡಿಯುತ್ತಿದ್ದರೂ, ದೇಶದಲ್ಲಿ ಸ್ವಲ್ಪಮಟ್ಟಿಗೆ ಆಹಾರ ಕೊರತೆ ಉಂಟಾಗುವ ಲಕ್ಷಣ ಗೋಚರಿಸುತ್ತಿದೆ. ಇದಕ್ಕೆ ಆಸ್ಪದ ನೀಡದಿರಲು ಕೃಷಿ ವಿಜ್ಞಾನಿಗಳು ಹಾಗೂ ವಿಶ್ವವಿದ್ಯಾಲಯಗಳು ರೈತರ ಬೆನ್ನೆಲುಬಾಗಿ ಸದಾ ಇರಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ.
ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗಿ ಆರ್ಥಿಕ ನಷ್ಟವನ್ನು ರೈತರು ಒಳಗಾಗುತ್ತಿದ್ದಾರೆ.ಉತ್ತಮ ಬೆಳೆಗೆ ಮಾರುಕಟ್ಟೆ ದರ ಸಿಗುವುದಿಲ್ಲ ಎಂಬ ಆಕ್ಷೇಪವೂ ಇದೆ. ಇದನ್ನು ಮನಗಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿ ನಿಲ್ಲಲು ಕಟಿಬದ್ಧವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಬೀಜ ಕೊರತೆ ನೀಗಿಸಲು ಆದ್ಯತೆ; ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಡಾ.ಅಶೋಕ್ ದಳವಾಯಿ ಮಾತನಾಡಿ, ಪ್ರಸ್ತುತ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ.
ಆದರೂ ಜನಸಂಖ್ಯೆಗೆ ಅನುಗುಣವಾಗಿ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಸವಾಲು ಎದುರಾಗಲಿದೆ. ಇದನ್ನು ಮನಗಂಡು ಹಾಲಿ ಶೇ. 55 ಬಿತ್ತನೆ ಬೀಜಗಳ ಕೊರತೆಯನ್ನು ನಿವಾರಿಸಿಕೊಳ್ಳಲು ಎಲ್ಲರೂ ಉತ್ತಮವಾದ ಬೀಜ ಉತ್ಪಾದನೆಗೆ ಗಮನ ನೀಡಬೇಕು. ದೇಸಿ ತಳಿ ಹಾಗೂ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಮುಂದಾದಲ್ಲಿ ಅದಕ್ಕೆ ಕೇಂದ್ರದಿಂದ ನೆರವು ಕೊಡಿಸಲು ಬದ್ಧ ಎಂದು ಭರವಸೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ಕೆ.ಬಿ. ಉಮೇಶ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


