ಕರ್ನಾಟಕ ಸರ್ಕಾರವು ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. 1956ರಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಕರ್ನಾಟಕದಲ್ಲಿ ನಮ್ಮನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಕನ್ನಡವೇ ಆಡಳಿತ ಭಾಷೆ ಎಂದು ಘೋಷಿಸುತ್ತ ಬಂದಿದೆ. ಆದರೆ ಇದು ಸ್ವಲ್ಪಮಟ್ಟಿಗೆ ಕಾರ್ಯಗತವಾಗಿದ್ದರೂ ಸಹ ಸಂಪೂರ್ಣವಾಗಿ ಕನ್ನಡದಲ್ಲಿ ಆಡಳಿತ ನಡೆಸಲು ಸರ್ಕಾರಗಳು ವಿಫಲಗೊಂಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ, ನೈಜ್ಯ ಹೋರಾಟಗಾರರ ವೇದಿಕೆ ಹೆಚ್.ಎಂ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದು, ಆದರೆ ಸಂತೋಷದ ವಿಷಯವೇನೆಂದರೆ, ಕರ್ನಾಟಕ ಸರ್ಕಾರವು ತಾಯಿ ಭುವನೇಶ್ವರಿಯ 25 ಅಡಿ ಎತ್ತರದ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ದೇಶ ಕಂಡ ಅತ್ಯದ್ಭುತ ಕಟ್ಟಡಗಳಲ್ಲಿ ಒಂದಾದ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸವೆಂದು ಬರೆಯಲಾಗಿದೆ. ಮತ್ತು ಈ ಶಕ್ತಿ ಕೇಂದ್ರದಿಂದಲೇ ಕರ್ನಾಟಕ ರಾಜ್ಯ ಸರ್ಕಾರ ನಾಗರಿಕರಿಗೆ ಆಡಳಿತ ನೀಡುತ್ತಿದೆ ಆದುದರಿಂದ ನಾಡ ದೇವತೆಯ ಪ್ರತಿಮೆಯು ವಿಧಾನಸೌಧದ ಮುಂದೆ ಪ್ರತಿಷ್ಠಾಪನೆ ಮಾಡಬೇಕಾಗಿರುವ ಗುರುತರ ಜವಾಬ್ದಾರಿ ಸರ್ಕಾರದ ಮೇಲೆ ಇತ್ತು. ಆದರೆ ಸರ್ಕಾರವು ನಾಡ ದೇವತೆ ತಾಯಿ ಭುವನೇಶ್ವರಿಯ ಪ್ರತಿಮೆಯನ್ನು ವಿಧಾನಸೌಧದ ಹಿಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಲಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದನ್ನು ನೈಜ ಹೋರಾಟಗಾರರ ವೇದಿಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಅವರು ತಿಳಿಸಿದರು.
ಹಾಗೆ ನಾಡ ದೇವತೆ ತಾಯಿ ಭುವನೇಶ್ವರಿ ಪ್ರತಿಮೆ ನಿರ್ಮಾಣವನ್ನು ಕೂಡ ಕರ್ನಾಟಕದ ಹೆಸರಾಂತ ಅತ್ಯುತ್ತಮ ಕಲಾವಿದರಿದ್ದರೂ ಸಹ, ಅದರಲ್ಲೂ ಬಾಲರಾಮನ ವಿಗ್ರಹವನ್ನು ಕೆತ್ತಿ ಸೈ ಎನಿಸಿಕೊಂಡ ಮೈಸೂರಿನ ಕಲಾವಿದ ಅರುಣ್ ಕುಮಾರ್ ಮತ್ತು ಇನ್ನಿತರ ಹಿರಿಯ ಕಲಾವಿದರಿದ್ದರೂ ಸಹ ಕನ್ನಡ ಬಗ್ಗೆ ತಿಳುವಳಿಕೆ ಇಲ್ಲದ ದೆಹಲಿ ಮೂಲದ ಕಲಾವಿದರಿಗೆ ಈ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಕೊಟ್ಟಿರುವುದು ಕೂಡ ಕನ್ನಡಿಗ ಕಲಾವಿದರಿಗೆ ಮಾಡಿರುವ ಅವಮಾನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ವಿಕಾಸಸೌಧ ಮತ್ತು ವಿಧಾನಸೌಧದ ಮಧ್ಯೆ ಪ್ರತಿಷ್ಠಾಪನೆ ಮಾಡಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಹಾಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜವಹರಲಾಲ್ ನೆಹರು, ಕೆಂಪೇಗೌಡ ಮತ್ತು ಬಸವಣ್ಣನವರ ನವರ ಪ್ರತಿಮೆಯು ವಿಧಾನಸೌಧದ ಮುಂದಿದೆ. ಆದರೆ ತಾಯಿ ಭುವನೇಶ್ವರಿಯ ಪ್ರತಿಮೆಯನ್ನುವಿಧಾನಸೌಧದ ಹಿಂಭಾಗದಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಕನ್ನಡಿಗರ ಹೆಮ್ಮೆಯ ಪ್ರತೀಕವಾದ ನಾಡ ದೇವತೆಯ ಪ್ರತಿಮೆಯು ವಿಧಾನಸೌಧಕ್ಕೆ ಬರುವವರಿಗೆ ಕಾಣದೆ ಇರುವ ರೀತಿಯಲ್ಲಿ ಕಾಟಾಚಾರಕ್ಕೆ ಪ್ರತಿಷ್ಠಾಪನೆ ಮಾಡಲು ಹೊರಟಿರುವುದು ನ್ಯಾಯ ಸಮ್ಮತವಲ್ಲ, ಮತ್ತು ಇದು ಕನ್ನಡಿಗರಿಗೆ ಮಾಡುವ ದ್ರೋಹವಾಗುತ್ತದೆ. ಏನೋ ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅಷ್ಟೇ ಈ ಪ್ರತಿಮೆಯ ಜಾಗವನ್ನು ಗುರುತಿಸಲಾಗಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿಗಳು ನಮ್ಮ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಯಲಾದ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಇರುವ ಜಾಗದಲ್ಲಿ ನಾಡ ದೇವತೆ ತಾಯಿ ಭುವನೇಶ್ವರಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ನಾಡ ದೇವತೆಗೆ ಸರ್ಕಾರವು ಸಕಲ ರೀತಿಯ ಗೌರವವನ್ನು ಕೊಡಬಹುದಾಗಿದೆ. ಈ ವಿಷಯದಲ್ಲಿ ತಾವುಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ತಮ್ಮೆಲ್ಲರಲ್ಲಿ ವಿನಯ ಪೂರ್ವಕವಾದ ಆಗ್ರಹವನ್ನುಪಡಿಸುತ್ತಿದೆ ಎಂದು ಅವರು ಇ ಮೇಲ್ ಮೂಲಕ ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q