ತುಮಕೂರು: ಶಾಲೆಯ ನೈರ್ಮಲ್ಯ ಕಾಪಾಡಬೇಕಾದ ಶಾಲೆಯ ಸಿಬ್ಬಂದಿ, ಆಡಳಿತ ಮಂಡಳಿ, ಶಾಲೆಯ ಮುಂಭಾಗದಲ್ಲಿ ಕೊಳಚೆ ತುಂಬಿದ್ದರೂ, ಸ್ವಚ್ಛಗೊಳಿಸಲು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವ ಘಟನೆ ತುಮಕೂರಿನ ಎಂಪ್ರೆಸ್ ಶಾಲೆಯಲ್ಲಿ ನಡೆದಿದ್ದು, ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷ್ಯವಹಿಸಿದ್ದಾರೆ ಅನ್ನೋ ಆಕ್ರೋಶದ ಮಾತುಗಳು ಇದೀಗ ಕೇಳಿ ಬಂದಿವೆ.
ತುಮಕೂರು ಮಹಾನಗರ ಪಾಲಿಕೆ, ಬಸ್ ನಿಲ್ದಾಣ ಸಮೀಪದ, ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿರುವ ಜಾಗದಲ್ಲಿ ಕಟ್ಟಿರುವ ಹಾಗೂ ಕೆಆರ್ ಜಿ ಎಂಎಸ್ ಎಂಬ ಶಾಲೆಯ ಆವರಣಕ್ಕೆ ಹೊಂದಿಕೊಂಡಂತಿರುವ, ತುಮಕೂರು ನಗರ ಹೃದಯ ಭಾಗದಲ್ಲಿರುವ ತುಮಕೂರಿನ ಎಂಪ್ರೆಸ್ ಶಾಲೆಯಲ್ಲಿ ಇಂತಹದ್ದೊಂದು ದುಸ್ಥಿತಿ ಕಂಡು ಬಂದಿದ್ದು, ಶಾಲೆಯ ಸ್ವಚ್ಚವಾಗಿಡದೇ ನಿರ್ಲಕ್ಷ್ಯವಹಿಸಲಾಗಿದೆ.
ಮಕ್ಕಳು ಊಟ ಮಾಡಿ ಕೈ ತೊಳೆಯಲು ಸರಿಯಾದ ವ್ಯವಸ್ಥೆ ಇಲ್ಲದೇ, ಶಾಲೆಯ ಆವರಣದಲ್ಲಿ ಮಕ್ಕಳು ಊಟದ ಬಳಿಕ ಎಸೆದ ಅನ್ನ, ಕೈ ತೊಳೆದ ನೀರು ಕೊಳೆಯಾಗಿ ಗಬ್ಬೆದ್ದು ನಾರುತ್ತಿದೆ. ಇದರ ಬಗ್ಗೆ ಯಾರ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಮುಖ್ಯೋಪಾದ್ಯಾಯರನ್ನು ಈ ಬಗ್ಗೆ ಕೇಳಿದರೆ, ತನಗೇನೂ ಕೇಳಿಸಿಲ್ಲ ಅನ್ನೊವಂತೆ ಅವರು ಹೋಗುತ್ತಿದ್ದಾರೆ. ಸಿಬ್ಬಂದಿಗಳ ಜೊತೆಗಂತೂ ಮಾತನಾಡುವ ಸ್ಥಿತಿಯೂ ಇಲ್ಲ ಎಂದು ಪೋಷಕರು ದೂರಿದ್ದಾರೆ.
ಈ ಬಗ್ಗೆ ನಮ್ಮ ತುಮಕೂರು ವರದಿಗಾರರು ಒಂದು ವಾರಕ್ಕೂ ಮುಂಚೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಸ್ವಚ್ಛತೆಯ ಸಮಸ್ಯೆಯ ಹಿನ್ನೆಲೆಯಲ್ಲಿ ಪೋಷಕರೊಬ್ಬರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದಾಗಿ ನಿರ್ಧರಿಸಿದ್ದರು. ಟಿಸಿ ತೆಗೆದುಕೊಳ್ಳಲು ಕೂಡ ನಿರ್ಧರಿಸಿದ್ದರು. ಆದರೆ ಸರ್ಕಾರಿ ಶಾಲೆ ಉಳಿಯ ಬೇಕು ಅನ್ನೋ ದೃಷ್ಟಿಯಿಂದ ನಮ್ಮತುಮಕೂರು ಪ್ರತಿನಿಧಿ ಅವರನ್ನು ಮನವೊಲಿಸಿದ್ದರು. ಆದರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೇ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದರಿಂದಾಗಿ ಮತ್ತೆ ಪೋಷಕರು ಕರೆ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಇಂದಿನ ದಿನಗಳಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಣುತ್ತಿದೆ. ಇಷ್ಟೊಂದು ಸವಾಲುಗಳಿದ್ದರೂ, ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇದೆ. ಶಾಲೆಯ ಆಡಳಿತ ಮಂಡಳಿಗಳು, ಕೇವಲ ಪಾಠ ಮಾಡಿಸುವುದು ಮಾತ್ರ ನಮ್ಮ ಜವಾಬ್ದಾರಿ ಅಂದುಕೊಂಡಂತಿದೆ. ಶಾಲೆಯ ಸ್ವಚ್ಛತೆಯ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದ ಇವರ ಮನಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇವರ ಮನೆಯ ಆವರಣವನ್ನು ಇವರು ಈ ರೀತಿಯಾಗಿ ಇರಲು ಬಿಡುತ್ತಾರೆಯೇ? ಬಡ ಮಕ್ಕಲು ಕಲಿಯುವ ಶಾಲೆಯ ಮುಂಭಾಗದಲ್ಲಿರುವ ಕೊಳಚೆ ಇವರ ಕಣ್ಣಿಗೆ ಬೀಳುತ್ತಿಲ್ಲವೇ? ಗಬ್ಬು ನಾತ ಇವರ ಮೂಗಿಗೆ ಬಡಿಯುತ್ತಿಲ್ಲವೇ? ಅನ್ನೋ ಆಕ್ರೋಶದ ,ಮಾತುಗಳು ಕೇಳಿ ಬಂದಿವೆ.
ವರದಿ: ಗಣೇಶ್ ಮಾರ್ನಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


