ನವದೆಹಲಿ, ಸೆಪ್ಟೆಂಬರ್ 26: ಭಾರತದ ಮುಂದಿನ ಅಟಾರ್ನಿ ಜನರಲ್ ಆಗುವಂತೆ ಕೇಂದ್ರ ಸರ್ಕಾರವು ನೀಡಿದ ಆಫರ್ ಅನ್ನು ಹಿರಿಯ ವಕೀಲ ಮುಕುಲ್ ರೋಹಟಗಿ ತಿರಸ್ಕರಿಸಿದ್ದಾರೆ.
ಸರ್ಕಾರವು ನೀಡಿದ ಪ್ರಸ್ತಾಪವನ್ನು ಮುಕುಲ್ ರೋಹಟಗಿ ತಿರಸ್ಕರಿಸುವುದಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಹಟಗಿ 2014 ಮತ್ತು 2017ರ ನಡುವೆ ಬಿಜೆಪಿ ನೇತೃತ್ವದ ಸರ್ಕಾರದ ಉನ್ನತ ವಕೀಲರಾಗಿದ್ದು, ಇವರ ನಂತರದಲ್ಲಿ ವಕೀಲ ಕೆ. ಕೆ. ವೇಣುಗೋಪಾಲ್ ಭಾರತದ ಅಟಾರ್ನಿ ಜನರಲ್ ಆಗಿದ್ದರು.
ಮುಕುಲ್ ರೋಹಟಗಿ ಅಕ್ಟೋಬರ್ 1 ರಿಂದ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ತಮ್ಮ ಅವಧಿಯನ್ನು ಪ್ರಾರಂಭಿಸಬೇಕಿತ್ತು. ಕೆ. ಕೆ. ವೇಣುಗೋಪಾಲ್ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ವಹಿಸಬೇಕಿತ್ತು.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ: ಮುಕುಲ್ ರೋಹಟಗಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ. ಇವರು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ರೋಹಟಗಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಗುಜರಾತ್ ಗಲಭೆ ಪ್ರಕರಣ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮತ್ತು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾದಕವಸ್ತು ಪ್ರಕರಣದ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದಾರೆ.
2023ರಲ್ಲಿ ಕೆಕೆ ವೇಣುಗೋಪಾಲ್ ನಿವೃತ್ತಿ: 91 ವರ್ಷದ ಕೆಕೆ ವೇಣುಗೋಪಾಲ್ ಅಧಿಕಾರಾವಧಿಯು 2020ರಲ್ಲಿ ಪೂರ್ಣಗೊಂಡಿತ್ತು. ವಯಸ್ಸಿನ ಸಮಸ್ಯೆಗಳಿಂದ ಅವರು ನಿವೃತ್ತಿ ಹೊಂದುವುದಕ್ಕೆ ಬಯಸಿದ್ದರು. ಅದಾಗ್ಯೂ, ಕೇಂದ್ರ ಸರ್ಕಾರವು ಅವರನ್ನು ಮುಂದುವರಿಯುವಂತೆ ವಿನಂತಿಸಿದ ಹಿನ್ನೆಲೆ ಮೂರು ವಿಸ್ತರಣೆಯನ್ನು ಒಪ್ಪಿಕೊಂಡಿದ್ದರು. ಇದೀಗ ಪ್ರಸ್ತುತ ಅವಧಿಯನ್ನೂ ಪೂರ್ಣಗೊಳಿಸಿದ ನಂತರದಲ್ಲಿ ಕೆಕೆ ವೇಣುಗೋಪಾಲ್ ನಿವೃತ್ತಿ ಹೊಂದಲಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy