ತುಮಕೂರು: ಶೀಲ ಶಂಕಿಸಿ ಪತ್ನಿ ಹಾಗೂ ಮಗನನ್ನು ಕೊಂದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂಬಾತ ಶಿಕ್ಷೆಗೆ ಒಳಗಾಗಿದ್ದು, ಪತ್ನಿ ಕಾವ್ಯ ಹಾಗೂ 5 ವರ್ಷದ ಮಗ ಜೀವನ್ ಗೆ ಹಾರೇಕೋಲಿನಿಂದ ಹೊಡೆದು 2022 ರ ಅಕ್ಟೋಬರ್ ನಲ್ಲಿ ಕೊಲೆ ಮಾಡಿದ್ದ. ಆಗಿನ ಗುಬ್ಬಿ ಸಿಪಿಐ ನದಾಫ್ ಅವರು ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಾಣೆಹಾ ಗ್ರಾಮದ ಕಾವ್ಯ ಜೊತೆ ಮೋಹನ್ ಕುಮಾರ್ ವಿವಾಹವಾಗಿದ್ದು, ಆರಂಭದಲ್ಲಿ ಇಬ್ಬರೂ ಅನ್ಯೂನ್ಯವಾಗಿದ್ದರು. ನಂತರ ಮೋಹನ್ ಕುಮಾರ್ ಕಾವ್ಯಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಆತನ ಕಾಟ ತಾಳಲಾರದೇ ತವರು ಮನೆಗೆ ಹೋಗಿದ್ದ ಕಾವ್ಯಳನ್ನು ನ್ಯಾಯ, ಪಂಚಾಯತಿ ಮಾಡಿ ಗಂಡನ ಮನೆಗೆ ಕರೆತಂದು ಬಿಡಲಾಗಿತ್ತು.
ನಂತರವೂ ಪದೇ ಜಗಳ ಮಾಡುತ್ತಿದ್ದುದರಿಂದ ಬೇಸತ್ತು ಕಾವ್ಯ ತವರು ಮನೆಗೆ ಹೋಗಿದ್ದಳು. ನಂತರ ಮೋಹನ್ ಕುಮಾರ್ ಕಾವ್ಯಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಏನೂ ಮಾಡುವುದಿಲ್ಲ ಎಂದು ನಂಬಿಸಿ ಆಕೆಯನ್ನು ತವರು ಮನೆಯಿಂದ ಕರೆತಂದು ಕೊಲೆ ಮಾಡಿದ್ದ.
ಪ್ರಕರಣದ ವಿಚಾರಣೆಯು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅವರು ಅಪರಾಧ ಸಾಬೀತಾದ್ದರಿಂದ ಆರೋಪಿ ಮೋಹನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಆರ್.ಟಿ.ಅರುಣ ಅವರು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


