ಹರಿಯಾಣ: ದೆಹಲಿಯ ಖ್ಯಾತ ಎಸಿಪಿ ಪುತ್ರನನ್ನು ಮದುವೆಗೆಂದು ಕೆರೆದುಕೊಂಡು ಹೋಗಿ ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಸೋನೆಪತ್ ನಲ್ಲಿ ನಡೆದಿದೆ. ಲಕ್ಷ್ಯ ಚೌಹಾಣ್(24) ಮೃತ ವ್ಯಕ್ತಿ.
ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್ ಪಾಲ್ ಸಿಂಗ್ ಅವರ ಪುತ್ರನಾದ ಚೌಹಾಣ್ ತೀಸ್ ಹಜಾರಿ ನ್ಯಾಯಾಲಯದ ವಕೀಲರಾಗಿದ್ದರು. ಲಕ್ಷ್ಯ ಸ್ನೇಹಿತರಾದ, ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಸ್ನೇಹಿತರ ಜೊತೆ ಮದುವೆಗೆ ಹೋದ ಮಗ ಮರಳಿ ಬರದ ಕಾರಣ ತಂದೆ ಯಶ್ ಪಾಲ್ ಸಿಂಗ್ ಅವರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದಾಗ ಚೌಹನ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚೌಹಣ್ ಅವರು ಭಾರದ್ವಾಜ್ ಬಳಿ ಸಾಲ ಪಡೆದಿದ್ದು, ಹಣವನ್ನು ಮರುಪಾವತಿಸಿರಲಿಲ್ಲ. ಇದನ್ನು ಭಾರದ್ವಾಜ್, ಅಭಿಷೇಕ್ ಬಳಿ ಹೇಳಿದ್ದಾನೆ. ಹೀಗಾಗಿ ಇಬ್ಬರು ಸೇರಿ ಚೌಹಣ್ ಕೊಲೆಗೆ ಸಂಚು ರೂಪಿಸಿ ಮದುವೆಗೆ ಆಹ್ವಾನಿಸಿ ಕೆರದುಕೊಂಡು ಹೋಗಿದ್ದಾರೆ. ಮದುವೆ ಮುಗಿದ ನಂತರ ಮೂವರು ವಾಪಸ್ ಆಗುವಾಗ ಮೂತ್ರ ವಿಸರ್ಜನೆಗೆಂದು ಕಾಲುವೆಯತ್ತ ಕರೆದೊಯ್ದಿದ್ದಾರೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇಬ್ಬರು ಚೌಹಾಣ್ ನನ್ನು ಕಾಲುವೆಗೆ ತಳ್ಳಿದ್ದಾರೆ. ಇತ್ತ ಕೃತ್ಯ ಎಸಗಿ ಭಾರದ್ವಾಜ್ ಮತ್ತು ಅಭಿಷೇಕ್ ಘಟನಾ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.


