ಮುಟ್ಟಿನ ಶಿಕ್ಷಣದ ಕೊರತೆಯಿಂದ ಸರಾಸರಿ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬರು ಶಾಲೆ ತೊರೆಯುತ್ತಿದ್ದಾರೆ. ಶೇ 70ರಷ್ಟು ಹುಡುಗಿಯರಿಗೆ ಮೊದಲ ಬಾರಿ ಋತುಚಕ್ರವಾದಾಗ ಅದರ ಅರಿವೇ ಇರುವುದಿಲ್ಲ’ ಎಂದು ನಟಿ ರೂಪಾಲಿ ಗಂಗೂಲಿ ಕಳವಳ ವ್ಯಕ್ತಪಡಿಸಿದರು.
ಅಮೃತ ವಿಶ್ವ ವಿದ್ಯಾಪೀಠ ಹಾಗೂ ಜೆಂಡರ್ ಇಕ್ವಾಲಿಟಿ ವರ್ಕಿಂಗ್ ಗ್ರೂಪ್ ಆಫ್ ಸಿ 20 ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ’ಯ ಸಮೀಕ್ಷಾ ವರದಿ ಬಿಡುಗಡೆ ಮಾಡಿ, ಮಾತನಾಡಿದರು. ‘ಹಲವರು ಮುಟ್ಟಿನ ವಿಷಯದಲ್ಲಿ ಭಯ ಪಡುತ್ತಾರೆ. ಹೆಣ್ಣು ಮಕ್ಕಳ ತಾಯಂದಿರಿಗೂ ಅರಿವಿನ ಕೊರತೆಯಿದೆ. ಇದರಿಂದಾಗಿ ಸೂಕ್ತ ಮಾರ್ಗದರ್ಶನ ಅವರಿಗೆ ಸಿಗುತ್ತಿಲ್ಲ. ಹಲವರು ಮುಟ್ಟಿನ ತೊಂದರೆಗಳನ್ನು ಹೇಳಿಕೊಳ್ಳದೆ ಮುಚ್ಚಿಡುತ್ತಾರೆ. ಇದು ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಮುಟ್ಟಿನ ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ. ಬಿ. ಕಾವೇರಿ, ‘ಮುಟ್ಟಿನ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಅತ್ಯಗತ್ಯ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು. ಹೆಣ್ಣು ಮಕ್ಕಳಿಗೆ ಸ್ಯಾನಟರಿ ಪ್ಯಾಡ್‌ಗಳು ಸುಲಭವಾಗಿ ದೊರೆಯುವಂತಾಗಬೇಕು. ಮುಟ್ಟು ಹೆಣ್ಣಿನ ದೇಹದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಇದು ಅವರ ಶೈಕ್ಷಣಿಕ ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಋತುಚಕ್ರದ ಸುತ್ತಲೂ ಇರುವ ನಿರ್ಬಂಧ ನಿವಾರಿಸಬೇಕು. ಎಲ್ಲರೂ ಈ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುವ ಮತ್ತು ಸಮಾನವಾಗಿ ಕಾಣುವ ಪರಿಸರ ನಿರ್ಮಾಣವಾಗಬೇಕು’ ಎಂದು ತಿಳಿಸಿದರು.
ಯುನೆಸ್ಕೊ ಪ್ರತಿನಿಧಿ ಹುಮಾ ಮಸೂದ್, ‘ಋತುಚಕ್ರದಲ್ಲಿ ನೈರ್ಮಲ್ಯತೆಯ ಬಗ್ಗೆ ಸೂಕ್ತ ಅರಿವು, ಜಾಗೃತಿ ಹಾಗೂ ಎಚ್ಚರಿಕೆ ಇರಬೇಕು. ಇದರ ಬಗ್ಗೆ ಧನಾತ್ಮಕ ಭಾವನೆಗಳು ಮೂಡುವಂತೆ ಮಾಡಬೇಕು’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


