ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
18ರಿಂದ 24 ವರ್ಷದೊಳಗಿನ ಮೂವರು ಸಹೋದರಿಯರು ನೇಣಿಗೆ ಕೊರಳೊಡ್ಡಿದ್ದು, ಮೂರು ಅಮಾಯಕ ಜೀವ ಬಲಿಗೆ ಇಡೀ ಗ್ರಾಮಸ್ಥರು ಕಣ್ಣೀರಾಗಿದ್ದಾರೆ. ತಂದೆ, ತಾಯಿ, ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕರ ಹೃದಯ ಕರಗಿಸಿದೆ.
ರಂಜಿತಾ(24), ಬಿಂದು(21) ಚಂದನಾ(18) ಮೃತಪಟ್ಟ ಸಹೋದರಿಯರಾಗಿದ್ದಾರೆ. ಸುಮಾರು 9 ದಿನಗಳ ಹಿಂದೆಯೇ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ. ಜನವರಿ 19ರಂದು ಈ ದುರ್ಘಟನೆ ಬೆಳಕಿಗೆ ಬಂದಿದೆ.
ಈ ಮೂವರು ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ ಪಿ ಸಿದ್ಧಾರ್ಥ್ ಗೋಯಲ್, ಸಿಪಿಐ ನಿರ್ಮಲಾ, ಪಿಎಸ್ ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1