ಹಿರಿಯೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ 230 ನೇ ಪುಣ್ಯಸ್ಮರಣೆಗೆ ಹಿರಿಯೂರು ನಗರದ ಜಾಮೀಯ ಮಸೀದಿಯ ಕಾರ್ಯದರ್ಶಿ ಮಹಮ್ಮದ್ ರಫೀಉಲ್ಲಾ ಹಾಗೂ ಅಧ್ಯಕ್ಷರಾದ ಬಿ.ಎಸ್.ನವಾಬ್ ಸಾಬ್ ರವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಹಿರಿಯೂರು ನಗರದ ದರ್ಗಾದಲ್ಲಿ ಟಿಪ್ಪು ಸುಲ್ತಾನ್ ಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಟಿಪ್ಪು ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷ ಸಮೀವುಲ್ಲಾ, ಟಿಪ್ಪು ಸುಲ್ತಾನ್ ಕೊಡುಗೆಯನ್ನು ಯುವಜನರಿಗೆ ತಿಳಿಸಬೇಕಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯಾವುದೇ ವ್ಯಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇದಲ್ಲದೆ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಿಟ್ಟ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಅಪಾರವಾದ ದೇಶ ಪ್ರೇಮ, ಆಡಳಿತ ಕೌಶಲ್ಯ, ಹೀಗೆ ಇವರ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.
ಭಾರತವನ್ನು ಆಕ್ರಮಿಸಿದ್ದ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸಲು ಮುಂದಾದ ಮೊದಲ ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್. ಅವರ ತಂದೆ ಹೈದರಾಲಿ ಮೈಸೂರು ರಾಜ್ಯದ ಸಂರಕ್ಷಣೆಗೆ ಯುದ್ಧ ಮಾಡಿದವರು. ಅಂತೆಯೇ ಅವರ ಪುತ್ರ ಟಿಪ್ಪು ಸುಲ್ತಾನ್ ಸಹ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದವರು ಎಂದು ಸ್ಮರಿಸಿದರು.
ಜಾಮೀಯ ಮಸೀದಿಯ ಅಧ್ಯಕ್ಷರಾದ ಬಿ.ಎಸ್.ನವಾಬ್ ಸಾಬ್ ಹಾಗೂ ಜಾಮೀಯ ಮಸೀದಿಯ ಕಾರ್ಯದರ್ಶಿಯಾದ ಮಹಮ್ಮದ್ ರಫೀ ಉಲ್ಲಾ ಅವರು ಕೂಡ ಇದೇ ವೇಳೆ ಟಿಪ್ಪು ಸಾಧನೆ ಹಾಗೂ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ನಗರದ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಅಲ್ತಾಫ್ ಉಲ್ಲಾ, ಟಿಪ್ಪು ಅಭಿಮಾನಿಗಳ ಮಹಾ ವೇದಿಕೆಯ ಅಧ್ಯಕ್ಷರಾದ ಸಮೀವುಲ್ಲಾ, ಅನೀಫ್ , ಅಬೀಜ್, ನಸೀಫ್, ಸೈಯದ್ ಅಹ್ಮದ್ , ಸಮಾಜ ಸೇವಕರಾದ ಮುಬಾರಕ್, ಜಾಮೀಯ ಮಸೀದಿಯ ಕಾರ್ಯದರ್ಶಿಯಾದ ಮಹಮ್ಮದ್ ರಫೀಉಲ್ಲಾ, ಅಧ್ಯಕ್ಷರಾದ ಬಿ.ಎಸ್.ನವಾಬ್ ಸಾಬ್ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


