ತುಮಕೂರು: ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ದುರ್ಗದಹಳ್ಳಿಯ ಕೃಷ್ಣಪ್ಪ ಎಂಬಾತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಕ್ಯಾತ್ಸಂದ್ರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಕೃಷ್ಣಪ್ಪ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ನಾಡಬಂದೂಕುಗಳ ತಯಾರಿ, ರಿಪೇರಿ, ಹಾಗೂ ಸಿಡಿಮದ್ದುಗಳ ತಯಾರಿಕೆಯಲ್ಲಿ ತೊಡಗಿದ್ದು, ಹತ್ತು ಇಪ್ಪತ್ತು ಸಾವಿರ ರೂ.ಗಳಿಗೆ ಬಂದೂಕುಗಳನ್ನು ಮಾರಾಟಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕ್ಯಾತ್ಸಂದ್ರ ಪೋಲಿಸರು ಪಿ.ಎಸ್.ಐ. ಓಂಕಾರ್ ರವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದು, ಆರೋಪಿಯ ಜೊತೆಗೆ ಅವನಿಂದ ಬಂದೂಕುಗಳನ್ನು ಅಕ್ರಮವಾಗಿ ಖರೀದಿಸಿದ್ದ ಚಿಕ್ಕನಾಗಯ್ಯ, ಶಿವರಾಜು, ನಾರಾಯಣ, ನರಸರಾಜು, ಸಿದ್ದಗಂಗಪ್ಪ, ಮಾರುತೇಶ, ಮಹಮ್ಮದ್ ಅಯಾಜ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರಗಳ ದಾಸ್ತಾನು ನಿಯಮದ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೆಚ್ವುವರಿ ಅಧೀಕ್ಷಕರಾದ ಉದೇಶ್ ಡಿವೈಎಸ್ಪಿ ಶ್ರೀನಿವಾಸ್, ಸಿಪಿಐ ಚನ್ನೇಗೌಡ, ಪಿಎಸ್ಐ ಓಂಕಾರ್ ಸಿಬ್ಬಂದಿಗಳಾದ ಕಿರಣ್, ಮಂಜುನಾಥ್ ಯತೀಶ್ ಮುಂತಾದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ವಾಡ್ ಅಭಿನಂದಿಸಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz