ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಮೂರನೇ ವಾರ್ಡಿನ ಎಸ್. ಶಿವರಂಜಿನಿ ಯಾದವ್ ಶನಿವಾರದಂದು ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಿ ಸುಧಾಕರ್ ರವರ ನೇತೃತ್ವದಲ್ಲಿ ಹಿರಿಯೂರು ನಗರಸಭೆಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದರು .
ಹಿರಿಯೂರು ತಾಲ್ಲೂಕಿನ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರಾದ ಡಿ. ಸುಧಾಕರ್ ಭಾಗವಹಿಸಿ, ಅವಿರೋಧವಾಗಿ ಆಯ್ಕೆಯಾದ ಹಿರಿಯೂರು ನಗರಸಭೆ ನೂತನ ಅಧ್ಯಕ್ಷೆ ಶಿವರಂಜನಿ ಯಾದವ್ ಅವರಿಗೆ ಶುಭ ಹಾರೈಸಿ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ಪತ್ರಿಕೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರಾದಂತಹ ಡಿ. ಸುಧಾಕರ್, ನಾನು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜಕಾರಣ ಮಾಡಿದವನು. ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ಮೊದಲಿನಿಂದಲೂ ತೀರಾ ಹಿಂದುಳಿದವರ, ಅಶಕ್ತರ ಧ್ವನಿಯಾಗುತ್ತಾ ಬಂದಿದ್ದೇನೆ. ಸರ್ವ ಜನಾಂಗವನ್ನು ಸಮಾನವಾಗಿ ಕಾಣುತ್ತಾ ಸಾಮಾಜಿಕ ನ್ಯಾಯ ಸರ್ವರಿಗೂ ಸಿಗಬೇಕು ಎಂಬ ಧ್ಯೇಯವನ್ನು ಪರಿಪಾಲನೆ ಮಾಡುತ್ತಾ ಬರಲಾಗಿದೆ ಎಂದರಲ್ಲದೇ, ನೂತನ ಅಧ್ಯಕ್ಷರಿಂದ ನಗರಕ್ಕೆ, ನಗರದ ಜನಕ್ಕೆ ಒಳ್ಳೆಯದಾಗಲಿ ಎಂದು ಇದೇ ವೇಳೆ ಹಾರೈಸಿದರು.
ನೂತನ ಅಧ್ಯಕ್ಷೆ ಶಿವರಂಜಿನಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಬೇಕೆನ್ನುವ ಗುರಿ ಹೊಂದಿದ್ದೇನೆ. ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವಂತಹ ಪರಿಪಾಠ ಕಡಿಮೆ ಮಾಡಲಾಗುವುದು. ಇ ಸ್ವತ್ತು, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ ಹೀಗೆ ಏನೇ ಕೆಲಸ ಆಗುವುದಿದ್ದರೂ ಪದೇ ಪದೇ ಅಲೆದಾಡಿಸದೆ ಆಡಳಿತಕ್ಕೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಮಹಿಳೆಯಾದ ನನ್ನನ್ನು ಗುರುತಿಸಿ, ಈ ಅವಕಾಶ ನೀಡಿದೆ. ಜನರ ಮತ್ತು ಪಕ್ಷದ ಋಣ ತೀರಿಸಲಾಗುವುದು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಾದ ಖಾದಿ ರಮೇಶ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ನಾಗೇಂದ್ರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಕಾಡುಗೊಲ್ಲ ಸಮುದಾಯದ ಮುಖಂಡರಾದ ಗೋಪಿಯಾದವ್ , ಜ್ಯೋತಿಲಕ್ಷ್ಮಿ , ಕೃಷ್ಣ ಪೂಜಾರಿ,ಕೋಳಿ ಪ್ರಭು ಯಾದವ್,ಸಾದತ್ ಉಲ್ಲಾ, ಉಪಾಧ್ಯಾಕ್ಷರಾದ ಬಿ.ಎನ್ .ಪ್ರಕಾಶ್, ನಗರಸಭೆ ಸದಸ್ಯರಾದ ಈ ಮಂಜುನಾಥ್, ಜಗದೀಶ್, ತಿಪ್ಪೇಸ್ವಾಮಿ, ಗುಂಡೇಶ್ ಕುಮಾರ್, ಮಹೇಶ್, ರತ್ನಮ್ಮ, ಜಬಿವುಲ್ಲಾ, ಕಲ್ಲಟ್ಟಿ ಹರೀಶ್, ಗಿರೀಶ್, ಕಾರ್ಮಿಕ ವಿಭಾಗದ ಶಿವಕುಮಾರ್ ವಿ., ಜ್ಙಾನೇಶ್ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz