ತುಮಕೂರು: ಯುವ ಕಲಾವಿದ ನಾಗೇಶ್ ವಿ. ಇವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವು ನಗರದ ಡಾ.ಗುಬ್ಬಿ ವೀರಣ್ಣ ಸ್ಮಾರಕ ಭವನದ ಕಲ್ಪಕುಂಜ ಕಲಾಗ್ಯಾಲರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಶ್ರೀನಿವಾಸ್, ಕಲೆಗಳು ನಶಿಸಿ ಹೋಗಬಾರದು. ಇನ್ನೂ ಹೆಚ್ಚಾಗಿ ಚಿಗುರೊಡೆಯಲಿ. ಮುಂದೆ ಚಿತ್ರ ಕಲೆಯು ಶಿಲ್ಪ ಕಲೆಯು ನಮಗೆ ಮುಖ್ಯವಾಗಿದೆ ಎಂದು ಪ್ರೋತ್ಸಾಹಕರ ನುಡಿಗಳನ್ನಾಡಿದರು.
ಹಿರಿಯ ಚಿತ್ರಕಲಾ ಕಲಾವಿದ ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎನ್.ಸುಬ್ರಹ್ಮಣ್ಯ ಮಾತನಾಡಿ, ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದರು. ಇದೇ ವೇಳೆ ಹಲವು ಬಗೆಯ ರೇಖಾ ಚಿತ್ರಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬಾಣಾವಾರ ವಿದ್ಯವರ್ಧಕ ಸಂಘ ಹಾಗೂ ಕರ್ನಾಟಕ ಚಿತ್ರಕಲಾ ಶಿಕ್ಷಕ ಸಂಘದ ನಿರ್ದೇಶಕ, ಚಿತ್ರಕಲಾ ಶಿಕ್ಷಕರಾಗಿರುವ ಡಿ.ಭೂತಯ್ಯನವರು ಮಾತನಾಡಿ, ಸಂಗೀತ ಸಾಹಿತ್ಯಕ್ಕೆ ಮತ್ತು ಕಲೆಗೆ ಪ್ರಾಮುಖ್ಯತೆ ಇದೆ. ಸಾಧನೆಗಳು ಹೆಚ್ಚಾಗಿರಬೇಕು. ಕಡಿಮೆಯಾಗಿರಬಾರದು. ಕಲೆಯು ಬೆಲ್ಲದ ಸವಿಯಂತೆ ತುಂಬಾ ಸಿಹಿಯಾಗಿರುತ್ತದೆ ಎಂದು ಕಲೆಯ ಬಗ್ಗೆ ವಿವರಿಸಿದರು.
ತುಮಕೂರು ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರು ಮಾತನಾಡಿ, ಮೊದಲು ಹಂದಿಗಳ ರಕ್ತದಿಂದ ಗೋಡೆಯ ಮೇಲೆ ಚಿತ್ರಗಳನ್ನು ಬರೆದು ಆ ಚಿತ್ರಗಳ ಮೂಲಕ ಜನರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾಷೆಗೂ ಮೊದಲು ಚಿತ್ರಕಲೆಯು ಹುಟ್ಟಿತ್ತು. ಚಿತ್ರಕಲೆಯು ಪದವಿಲ್ಲದ ಪದ್ಯದಂತೆ ಎಂದು ವಿವರಿಸಿದರು.
ಇನ್ನೂ ಕಲಾವಿದ ನಾಗೇಶ್ ವಿ. ಮಾತನಾಡಿ, ನನ್ನ ಚಿತ್ರಕಲೆಯಲ್ಲಿ ಹೆಚ್ಚಾಗಿ ಹೆಣ್ಣಿನ ಮೇಲೆ ಆಗುವ ಶೋಷಣೆಯ ಬಗ್ಗೆ ತಿಳಿಸಲಾಗಿದೆ. ಹೆಣ್ಣು ಎಂಬವಳು ಪ್ರಕೃತಿ. ಸೌಂದರ್ಯ, ತಾಯಿ, ಕರುಣೆ, ಪ್ರೀತಿ ಮತ್ತು ಸೃಷ್ಟಿಕರ್ತೆಯಾಗಿದ್ದಾಳೆ. ಹೆಣ್ಣಿನ ಮೇಲಾಗುವ ಶೋಷಣೆಯನ್ನು ತಡೆಗಟ್ಟಬೇಕೆಂದು ನಾನು ನನ್ನ ಚಿತ್ರಗಳ ಮೂಲಕ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿದ್ದೇನೆ.
ನನ್ನ ಚಿತ್ರದಲ್ಲಿ ಹಸುವಿನ ಚಿತ್ರಗಳನ್ನು ಬಳಸಿಕೊಂಡು ಪವಿತ್ರವಾದ ಗೋವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಗೋವಿನ ವಧೆಯನ್ನು ತಡೆಯುವಂತೆ ಚಿತ್ರಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದೇನೆ ಎಂದು ನಾಗೇಶ್ ಹೇಳಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700