ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸರ್ಕಾರಿ, ಖಾಸಗಿ ಕಾರ್ಯಕ್ರಮ ಸೇರಿ ಮೈದಾನದಲ್ಲಿ ಸದಾ ಒಂದಲ್ಲೊಂದು ಚಟುವಟಿಕೆ ನಡೆಯುತ್ತಿರುತ್ತದೆ. ಆದರೆ, ಕಾರ್ಯಕ್ರಮ ಆಯೋಜಕರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈದಾನದಲ್ಲಿ ಕಾಲಿಟ್ಟ ಕಡೆಯಲ್ಲಿ ಮೊಳೆಗಳು ಕಾಲಿಗೆ ಚುಚ್ಚಿಕೊಳ್ಳುತ್ತಿವೆ.
ಮೈದಾನದಲ್ಲಿ ದಸರಾ ಪ್ರಯುಕ್ತ ಸುಮಾರು 11 ದಿನಗಳ ಕಾಲ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಬೃಹತ್ ಪೆಂಡಾಲ್ ಅಳವಡಿಸಲಾಗಿತ್ತು. ಈ ಸಮಯದಲ್ಲಿ ನೆಲಕ್ಕೆ ಹೊಡೆದಿದ್ದ ಮೊಳೆಗಳನ್ನು ಈವರೆಗೆ ಹೊರ ತೆಗೆದಿಲ್ಲ. ಇದರ ನಂತರ ನಾನಾ ಕಾರ್ಯಕ್ರಮಗಳು ಮೈದಾನದಲ್ಲಿ ನಡೆದವು. ಅವರು ಸಹ ಇದನ್ನು ಮುಂದುವರಿಸಿದ್ದು, ಮೊಳೆ ಮತ್ತಷ್ಟು ಜಾಸ್ತಿಯಾದವು. ಇದರ ಪರಿಣಾಮ ಈಗ ವಿದ್ಯಾರ್ಥಿಗಳು, ಕ್ರೀಡಾಪಟುಗಳ ಮೇಲೆ ಬೀಳುತ್ತಿದೆ. ಅಪಾಯದಲ್ಲಿ ಆಟವಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
‘ತುಮಕೂರು ದಸರಾ’ ಅಂಗವಾಗಿ ಧಾರ್ಮಿಕ ಮಂಟಪ, ಮುಖ್ಯ ವೇದಿಕೆ ನಿರ್ಮಿಸಿದ್ದ ಜಾಗದಲ್ಲಿ ಮೊಳೆಗಳ ರಾಶಿಯೇ ಇದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೀರಿನ ಹರಿವಿಗೆ ಕೆಲ ಮೊಳೆಗಳು ಕಿತ್ತು ಬಂದಿವೆ. ಕ್ರೀಡಾಪಟುಗಳು, ಮೈದಾನದಲ್ಲಿ ವಾಕಿಂಗ್ ಮಾಡುವವರು ಇದನ್ನು ಗಮನಿಸದೆ ಮುಂದೆ ನಡೆದರೆ ಅಪಾಯ ತಪ್ಪಿದ್ದಲ್ಲ.
ಪೋಷಕರು ತಮ್ಮ ಮಕ್ಕಳನ್ನು ಮೈದಾನಕ್ಕೆ ಕರೆ ತಂದು ಕ್ರಿಕೆಟ್, ಓಟದ ಅಭ್ಯಾಸ ನಡೆಸುತ್ತಾರೆ. ಕೆಲವರು ಬರಿಗಾಲಿನಲ್ಲಿ ಅಭ್ಯಾಸ ಮಾಡುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಮೊಳೆಗಳು ಮಳೆಗೆ ಒದ್ದೆಯಾಗಿ ತುಕ್ಕು ಹಿಡಿದಿವೆ. ಇವು ಕಾಲಿಗೆ ಚುಚ್ಚಿದರೆ ಶಸ್ತ್ರ ಚಿಕಿತ್ಸೆಯೇ ಗತಿಯಾಗಬಹುದು ಎನ್ನುವ ಆತಂಕದ ಮಾತುಗಳು ಕೇಳಿ ಬಂದಿವೆ.
ಈ ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡುವ ಸಾಮರ್ಥ್ಯವಿಲ್ಲದಿದ್ದರೆ, ಇಲ್ಲಿ ಕಾರ್ಯಕ್ರಮಗಳಿಗೆ ಯಾಕೆ ಅನುಮತಿ ನೀಡಬೇಕು ಅಂತ ಜಿಲ್ಲಾಡಳಿತವನ್ನ ಸಾರ್ವಜನಿಕರು ಪ್ರಶ್ನಿಸ್ತಾ ಇದ್ದಾರೆ. ಕೇವಲ ಕ್ರೀಡೆಯ ಉದ್ದೇಶಕ್ಕೆ ಮಾತ್ರವೇ ಮೈದಾನ ಬಳಕೆ ಮಾಡಿ ಎಂದು ವ್ಯಾಪಕ ಒತ್ತಾಯ ಕೇಳಿ ಬಂದಿದೆ. ಜಿಲ್ಲಾಡಳಿತ ಇನ್ನಾದರೂ ಈ ಸಂಬಂಧ ಗಮನ ಹರಿಸುತ್ತಾ, ಎಂದು ಕಾದುನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC