ನಾಲ್ವಡಿ ಕೃಷ್ಣರಾಜ ಒಡೆಯರು ಬ್ರಿಟೀಷರನ್ನು ಚಾಕಚಕ್ಯತೆಯಿಂದ ಎದುರಿಸಿ ಕನ್ನಡಿಗರ ಅಸ್ಮಿತೆ ಉಳಿಸಿದರು’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಶುಕ್ರವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.
‘ಬ್ರಿಟಿಷರ ಒಡೆದು ಆಳುವ ನೀತಿಯನ್ನು ಸಕಾರಾತ್ಮಕವಾಗಿ ಮೆಟ್ಟಿ ನಿಲ್ಲುವ ದೃಷ್ಟಿಯಿಂದ ಕನ್ನಡಿಗರನ್ನು ಒಂದುಗೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿರುವುದು ಅವರ ದೂರದೃಷ್ಟಿಯ ದ್ಯೋತಕ’ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ ಪುತ್ಥಳಿಯು ಪರಿಷತ್ತಿನ ಮೊದಲ ಮಹಡಿಯಲ್ಲಿತ್ತು. ಪರಿಷತ್ತಿನ ಅಧ್ಯಕ್ಷರನ್ನು ನೋಡಲು ಬರುವವರು ಮಾತ್ರ ಮಹಾರಾಜರ ಪುತ್ಥಳಿಯ ದರ್ಶನವನ್ನು ಪಡೆಯಬಹುದಿತ್ತು. ಈಗ ಪುತ್ಥಳಿಯನ್ನು ಪರಿಷತ್ತಿನ ಆವರಣದಲ್ಲಿ ಸ್ಥಾಪನೆ ಮಾಡಿ ಜನ ಸಾಮಾನ್ಯರೂ ನಾಲ್ವಡಿ ಅವರಿಗೆ ಗೌರವ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮಾತನಾಡಿ, ಪುತ್ಥಳಿಯ ಜೊತೆಗೆ ಮಹಾಪುರುಷರ ಬದುಕು, ಆದರ್ಶ ನೆನಪಾಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯ ಮೂಲಕ ಅವರನ್ನೇ ಕಂಡಂತಾಗಬೇಕು. ನಾಲ್ವಡಿಯವರು ದಾರಿದೀಪವನ್ನು ಸ್ಥಾಪಿಸಿದ್ದರು ಎಂದು ಎಲ್ಲರೂ ನೆನಪು ಮಾಡಿಕೊಳ್ಳುತ್ತಾರೆ. ವಾಸ್ತವವೆಂದರೆ ಅವರು ನಾಡಿನ ಜನರ ಬದುಕಿಗೇ ದಾರಿದೀಪವಾಗಿದ್ದವರು’ ಎಂದು ಹೇಳಿದರು.
ಇದೇ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಯನ್ನು ಬಿಂಬಿಸುವ ಕವಿತೆಯನ್ನು ಕವಿ ದೊಡ್ಡರಂಗೇಗೌಡ ಓದಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


