ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸೋಮವಾರ ಕೆಆರ್ ಪುರಂನಲ್ಲಿ ಬುಲ್ಲೋಜರ್ಗಳೊಂದಿಗೆ ಅತಿಕ್ರಮಣ ತೆರವುಗೊಳಿಸಲು ಮುಂದಾದ ವೇಳೆ ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಬುಲ್ಲೋಜರ್ ವಾಹನದ ಕೀಗಳನ್ನು ಕಸಿದುಕೊಂಡು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಘಟನೆ ನಡೆಯಿತು.
ಬಿಬಿಎಂಪಿಯ ಎಸ್ಟಬ್ಲ್ಯುಡಿ ಇಲಾಖೆ ಅಧಿಕಾರಿಗಳು ಮತ್ತು ಮಹದೇವಪುರ ವಲಯ ಎಂಜಿನಿಯರ್ಗಳು, ಭೂಮಾಪಕರು ಮತ್ತು ಸ್ಥಳೀಯ ಪೊಲೀಸರೊಂದಿಗೆ ಸೋಮವಾರ ಬೆಳಿಗ್ಗೆ ತಮ್ಮ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದೊಡ್ಡನೆಕುಂದಿಯ ಸರ್ವೆ ನಂಬರ್ 24/1, 3, 4, ಮತ್ತು 5ರಲ್ಲಿ ಫರ್ನ್ ಸಿಟಿ ಲೇಔಟ್ ಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ವಿಲ್ಲಾ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ನಂದೀಶ್ ರೆಡ್ಡಿ, ಬುಲೋಜರ್ನ ಕೀ ಕಿತ್ತುಕೊಂಡರು ಮತ್ತು ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಅಡ್ಡಿ ಪಡಿಸಿದರು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಷೇಪಣೆಗಳ ಹೊರತಾಗಿಯೂ, ಸುಮಾರು 50 ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ, 200 ಮೀಟರ್ ಉದ್ದದ ಮಳೆನೀರು ಚರಂಡಿ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಈಜುಕೊಳ, ಒಳಚರಂಡಿ ಸಂಸ್ಕರಣಾ ಘಟಕ, ಕಟ್ಟಡಗಳ ಭಾಗಗಳು ಮತ್ತು ಕಾಂಪೌಂಡ್ ಗೋಡೆಯನ್ನು ತೆರೆವುಗೊಳಿಸಲಾಯಿತು ಎಂದು ಎಂಜಿನೀಯರ್ ವಿವರಿಸಿದ್ದಾರೆ. ತೆರವು ಕಾರ್ಯಾಚರಣೆ ವೀಕ್ಷಿಸಿದ ನಂದೀಶ್ ರೆಡ್ಡಿ, ಬಿಬಿಎಂಪಿ ಮೊದಲು ಮಳೆನೀರು ಚರಂಡಿಯ ಅಡೆತಡೆಗಳನ್ನು ತೆಗೆದುಹಾಕಬೇಕು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. “ಫರ್ನ್ ಸಿಟಿಯಲ್ಲಿ ಮನೆಗಳು ಮತ್ತು ಆಸ್ತಿಗಳನ್ನು ಕೆಡವುವುದರಿಂದ ಜನ ಬೀದಿಗೆ ಬರಬೇಕಾಗುತ್ತದೆ ಎಂದು ರೆಡ್ಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹದೇವಪುರ ವಲಯದ ದೊಡ್ಡನೆಕುಂದಿ, ಅಂಜನಾಪುರ ಮತ್ತು ಹೊಯ್ಸಳನಗರದಲ್ಲಿ ಸೋಮವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಮಳೆನೀರು ಚರಂಡಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


