ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಕೊಡದಿದ್ದರೆ ಇಲ್ಲ. ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾವೆಲ್ಲರೂ ಸ್ನೇಹಿತರು. ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನಗೆ ಬಿಜೆಪಿ ಮೇಲೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ. ನಾನು ಪಕ್ಷ ಬಿಡುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಪಕ್ಷ ನನಗೆ ಕೊಟ್ಟ ಎಲ್ಲ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದೇನೆ. ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ನಾನು ಮೊದಲು ಕಾಂಗ್ರೆಸ್ ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯವಾಗಿ ಇರುತ್ತವೆ. ನಾನು ಯಾವತ್ತಾದರೂ ನನ್ನ ಪುತ್ರನಿಗೆ ಟಿಕೆಟ್ ಕೇಳಿದ್ದೀನಾ? ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ಎಲ್ಲರಿಗೂ ತಮ್ಮ ಮಕ್ಕಳು ಮೇಲೆ ಪ್ರೀತಿ ಇರುತ್ತದೆ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಆದರೆ ಬೇರೆ ರಾಜಕಾರಣಿಗಳ ಮಕ್ಕಳು ರಾಜಕಾರಣದಲ್ಲಿ ಇರಬಹುದಾ? ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕು ಅಲ್ವಾ? ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅಂದರೆ ನಮಗೂ ಬೇಡ ಎಂದು ಸಚಿವ ಸೋಮಣ್ಣ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


