ತುಮಕೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿಕೆ, ಶಾಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜಿಲ್ಲೆಯ ವಿನೂತನ ಕಾರ್ಯಕ್ರಮಗಳನ್ನು ಪರಿಗಣಿಸಿ ತುಮಕೂರು ಜಿಲ್ಲಾ ಪಂಚಾಯಿತಿಗೆ 2025ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ಹಾಗೂ ಕಾಯಕ ಬಂಧು ಗಂಗಮ್ಮ ಅವರಿಗೆ ಮೇಟ್ ಪ್ರಶಸ್ತಿ ಸೇರಿ 3 ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ–2025ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್, ಅಪರ ಮುಖ್ಯ ಕಾರ್ಯದರ್ಶಿ(ಗ್ರಾಮೀಣಾಭಿವೃದ್ಧಿ) ಅಂಜುಮ್ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ ಕುಮಾರ್ ಮಲಪಾಟಿ ಉಪಸ್ಥಿತರಿದ್ದರು.
ನರೇಗಾ ಯೋಜನೆಯಡಿ ಜಿಲ್ಲೆಗೆ 2023-24ನೇ ಸಾಲಿಗಾಗಿ 42 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, 63 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯು ಶೇಕಡ 150ರಷ್ಟು ಸಾಧನೆ ಮಾಡಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ರಸ್ತೆ, ಚರಂಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆದ್ಯತೆ ಮೇರೆಗೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಅಲ್ಲದೆ 2023–24ನೇ ಸಾಲಿನಲ್ಲಿ 123 ಕೋಟಿ ರೂ.ವೆಚ್ಚದಲ್ಲಿ 4015 ಶಾಲಾ ಅಭಿವೃದ್ಧಿ, 98 ಕೋಟಿ ರೂ. ವೆಚ್ಚದಲ್ಲಿ 2080 ರಸ್ತೆ ಕಾಮಗಾರಿ, 85 ಕೋಟಿ ರೂ. ವೆಚ್ಚದಲ್ಲಿ 2069 ಚರಂಡಿ ಕಾಮಗಾರಿ, 12 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ಸಂಜೀವಿನಿ ಭವನ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ.
ಬರದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಿಷನ್ 500 ಅಭಿಯಾನವನ್ನು ಹಮ್ಮಿಕೊಂಡು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತಿಯ 400 ರಿಂದ 500 ರೈತರನ್ನು ಗುರುತಿಸಿ ಅವರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡುವ ಅಭಿಯಾನ ಮಾಡಲಾಗಿದೆ. ಈ ಅಭಿಯಾನದಡಿ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 52,400 ಬದು ಕಾಮಗಾರಿಗಳನ್ನು ರೈತರಿಗೆ ನೀಡಲಾಗಿದೆ.
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 1010 ಕೆರೆ ಅಭಿವೃದ್ಧಿ, 1450 ನಾಲಾ ಅಭಿವೃದ್ಧಿ, 15200 ಅರಣ್ಯೀಕರಣದ ಕಾಮಗಾರಿಗಳು ಸೇರಿದಂತೆ ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಇಲಾಖೆಯಲ್ಲಿಯೂ ಉದ್ಯೋಗವನ್ನು ನೀಡಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಉಜ್ಜಿನಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ:
ಕುಣಿಗಲ್ ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಗೆ 2025ರ ನರೇಗಾ ಹಬ್ಬದಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ದಕ್ಕಿದೆ. 2023-24ನೇ ಸಾಲಿನಲ್ಲಿ 75,000 ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಉಜ್ಜಿನಿ ಗ್ರಾಮ ಪಂಚಾಯಿತಿಗೆ ಈ ಪ್ರಶಸ್ತಿ ಸಿಕ್ಕಿದೆ.
ಪಾವಗಡ ಗಂಗಮ್ಮಗೆ ಒಲಿದ ಮೇಟ್ ಪ್ರಶಸ್ತಿ :
ಪಾವಗಡ ತಾಲೂಕಿನ ಸಿಕೆ ಪುರ ಗ್ರಾಮ ಪಂಚಾಯಿತಿಯ ಗಂಗಮ್ಮ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 329 ಕುಟುಂಬಗಳಿಗೆ ಉದ್ಯೋಗ ಕೊಡಿಸಿದ್ದು, ಇದರಲ್ಲಿ 246 ಕುಟುಂಬಗಳು 100 ದಿನಗಳ ನರೇಗಾ ಕೂಲಿಯನ್ನು ಮುಗಿಸುವಲ್ಲಿ ಯಶಸ್ವಿಯಾಗಿವೆ. ಈ ಕಾರಣದಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಪಡಿಸುವ ನಿಟ್ಟಿನಲ್ಲಿ ಸಾಧನೆ ಮಾಡಿದ ಗಂಗಮ್ಮನವರಿಗೆ ಮೇಟ್(ಕಾಯಕ ಬಂಧು) ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಸ್ವೀಕರಿಸುವ ವೇಳೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ., ಉಪ ಕಾರ್ಯದರ್ಶಿ ಅಭಿವೃದ್ಧಿ ಸಂಜೀವಪ್ಪ ಕೆ.ಪಿ. ಸೇರಿದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ತಾಂತ್ರಿಕ ಸಿಬ್ಬಂದಿ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4