ಡಿಜಿಟಲ್ ಕ್ರಾಂತಿಯಾದಂತೆ ಅದೇ ವೇಗದಲ್ಲಿ ಸೈಬರ್ ಅಪರಾಧ ಪ್ರಕರಣಗಳೂ ದೇಶದಾದ್ಯಂತ ಹೆಚ್ಚುತ್ತಿವೆ. 45 ಬಗೆಯ ಸೈಬರ್ ವಂಚನೆ ಪ್ರಕರಣಗಳು ನಡೆಯುತ್ತಿವೆ’ ಎಂದು ಸಿಐಡಿ ಡಿಜಿಪಿ ಡಾ. ಎಂ. ಎ. ಸಲೀಂ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ‘ಸೈಬರ್ ಅಪರಾಧಗಳು ಹಾಗೂ ಕೃತಕ ಬುದ್ಧಿಮತ್ತೆ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ‘ಒಟಿಪಿ ವಂಚನೆ, ಒಎಲ್‌ಎಕ್ಸ್ ಹಾಗೂ ಇತರೆ ವಸ್ತುಗಳ ಮಾರಾಟ ಜಾಲತಾಣ, ಫೇಸ್‌ಬುಕ್ ಹಾಗೂ ವಾಟ್ಸ್ ಆ್ಯಪ್ ವಿಡಿಯೊ ಕರೆ, ಡೆಬಿಟ್- ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್, ಲಿಂಕ್ ಕಳುಹಿಸಿ ವಂಚನೆ, ಉಡುಗೊರೆ ಆಮಿಷ, ಹೂಡಿಕೆ, ಟ್ರೇಡಿಂಗ್ ಆ್ಯಪ್ ವಂಚನೆ, ವೈವಾಹಿಕ ಜಾಲತಾಣ ವಂಚನೆ, ಎನಿ ಡೆಸ್ಕ್, ಟೀಮ್ ವೀವರ್, ಕ್ವಿಕ್ ಸಪೋರ್ಟ್, ಉದ್ಯೋಗದ ಹೆಸರಿನಲ್ಲಿ, ಸಿಮ್ ಕಾರ್ಡ್ ಬ್ಲಾಕ್, ನಕಲಿ ಖಾತೆ ಸೃಷ್ಟಿಸಿ ವಂಚನೆ. ಹೀಗೆ ನಾನಾ ಸ್ವರೂಪದಲ್ಲಿ ವಂಚನೆ ಪ್ರಕರಣಗಳು ನಡೆಯುತ್ತಿವೆ. ಇದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು’ ಎಂದು ಸಲೀಂ ಹೇಳಿದರು.
‘ಶೇ 5ರಷ್ಟು ಸಾಮಾನ್ಯ ಅಪರಾಧಗಳು ನಡೆದರೆ, ಶೇ 20ರಷ್ಟು ಸೈಬರ್ ಅಪರಾಧಗಳು ನಡೆಯುತ್ತಿವೆ. ದಾಖಲಾದ ಪ್ರಕರಣಗಳ ಪೈಕಿ ಶೇ 17ರಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ವಿವರಿಸಿದರು. ಕಂಪನಿಗಳ ದತ್ತಾಂಶ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಕಂಪನಿಗಳಿಗೆ ಸಂಬಂಧಿಸಿದ ಪಾಸ್‌ವರ್ಡ್ ಅನ್ನು ಬೇರೆ ಯಾರಿಗೂ ನೀಡಬಾರದು. ಅನುಮಾನ ಬಂದರೆ ಸೈಬರ್ ಠಾಣೆಗೆ ಮಾಹಿತಿ ನೀಡಬೇಕು.
ಶಿಕ್ಷಣ ಅರ್ಧದಲ್ಲೇ ಮೊಟಕುಗೊಳಿಸಿದವರು ಈ ಜಾಲದಿಂದ ಸುಲಭವಾಗಿ ಹಣ ಮಾಡಲು ಬರುತ್ತಿದ್ದಾರೆ. ಆರೋಪಿಗಳು ಹಿಂದುಳಿದ ಪ್ರದೇಶಗಳಿಂದ ಬಂದವರೇ ಹೆಚ್ಚು. ವಂಚನೆ ನಡೆಯುತ್ತಿರುವುದು ಗೊತ್ತಾದ ತಕ್ಷಣವೇ ಸೈಬರ್ ಠಾಣೆಗಳಿಗೆ ದೂರು ನೀಡಬೇಕು. ಬ್ಯಾಂಕ್ ಖಾತೆಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಲ್ಲಿ ಉತ್ತಮ ಸೈಬರ್ ಲ್ಯಾಬ್ ಇದೆ. ಸೈಬರ್ ತಜ್ಞರ ಸಲಹೆ ಪಡೆದು ಪ್ರಕರಣ ಪತ್ತೆ ಹಚ್ಚಲಾಗುತ್ತಿದೆ ಎಂದರು. ಎಫ್‌ಕೆಸಿಸಿಐಯ ಐಟಿ-ಬಿಟಿ ಸಮಿತಿ ಮುಖ್ಯಸ್ಥೆ ರೂಪಾ ರಾಣಿ ಮಾತನಾಡಿ, ‘ತಂತ್ರಜ್ಞಾನ ಆಧಾರಿತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಕಷ್ಟಪಟ್ಟು ಉಳಿಸಿದ ಹಣ ಕ್ಷಣಾರ್ಧದಲ್ಲಿ ಖಾತೆಯಿಂದ ಖಾಲಿ ಆಗುತ್ತಿದೆ’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


