ಬದಲಾದ ಆಹಾರ ಪದ್ಧತಿ, ಜೀವನ ಶೈಲಿಗಳಿಂದ ಇಂದು ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಗ್ಯಾಸ್ಟ್ರಿಕ್, ಅಲರ್ಜಿ ಸೇರಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಸಾಮಾನ್ಯ ಎಂಬಂತಾಗಿದೆ. ಸಂಸ್ಕರಿಸಿದ ಹಾಗೂ ಟೇಸ್ಟ್ ಪೌಡರ್ ಬಳಸಿದ, ಮತ್ತೆ ಮತ್ತೆ ದುದಿದ ಎಣ್ಣೆ ಬಳಸಿದ ಆಹಾರಗಳ ಸೇವನೆಗೆ ಕಡಿವಾಣ ಹಾಕುವ ಜೊತೆಗೆ ಕೆಲವೊಂದು ಮನೆಯಲ್ಲೇ ಸಿಗುವ ಅಡುಗೆ ಸಾಮಗ್ರಿಗಳಿಂದಲೇ ಗ್ಯಾಸ್ಟ್ರಿಕ್ ಸಮಸ್ಯೆ ದೂರಗೊಳಿಸಬಹುದು. ಒಬ್ಬೊಬ್ಬರಿಗೆ ಒಂದೊಂದು ಆಹಾರದಿಂದ ಅಲಜಿ, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾರಿಗೆ ಯಾವುದರಿಂದಲಾದ್ರೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ಆಲೂ,ಬದನೆ,ಕಡ್ಲೆಕಾಳು ತೊಗರಿಬೇಳೆ ಗ್ಯಾಸ್ಟ್ರಿಕ್ ಉಂಟು ಮಾಡುತ್ತವೆ ಎನ್ನಲಾಗುತ್ತದೆ. ಗ್ಯಾಸ್ಟ್ರಿಕ್ ಹೊಟ್ಟೆಯ ಸೆಡೆತ, ಹೊಟ್ಟೆಯುಬ್ಬರಿಕೆ, ತಲೆ ಸುತ್ತುವಿಕೆ ಮತ್ತು ಎದೆಯುರಿಗೆ ಕಾರಣವಾಗುತ್ತದೆ. ಜೀರ್ಣಾಂಗಗಳಲ್ಲಿ ವಾಯು ಉತ್ಪತ್ತಿಯಾಗಿ ಹೊರಬರಲು ನೀಡುವ ಒತ್ತಡವೇ ಗ್ಯಾಸ್ಟ್ರಿಕ್. ತಜ್ಞರು ಈ ಸಮಸ್ಯೆಗೆ ನಾನಾ ಕಾರಣಗಳನ್ನು ಪಟ್ಟಿ ಮಾಡುತ್ತಾರೆ.
ಊಟದ ಸಮಯದಲ್ಲಿ ಪ್ರತಿ ತುತ್ತನ್ನೂ ನುಂಗುವಾಗ ಇದರೊಂದಿಗೆ ಕೊಂಚ ಪ್ರಮಾಣದಲ್ಲಿ ಹೊಟ್ಟೆ ಸೇರುವ ವಾತಾವರಣದ ಗಾಳಿ. ಅಹಾರ ಜೀರ್ಣಗೊಳ್ಳುವಾಗ ಉತ್ಪತ್ತಿಯಾಗುವ ಅನಿಲಗಳು ಈ ಸಮಸ್ಯೆಗೆ ಕಾರಣವಾಗುತ್ತವೆ ಎನ್ನುತ್ತಾರೆ.ದೊಡ್ಡ ಕರುಳಿನಲ್ಲಿ ಹೆಚ್ಚಿನ ಪ್ರಮಾಣದ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳಿವೆ. ಇವು ಜೀರ್ಣಕ್ರಿಯೆಗೆ ಅಗತ್ಯವಾಗಿವೆ. ಅನಿಲದ ಪ್ರಮಾಣ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸಂಗ್ರಹವಾಗುವವರೆಗೂ ಇದು ತೊಂದರೆ ಎಂದು ಅನ್ನಿಸುವುದಿಲ್ಲ. ಆದರೆ ಯಾವಾಗ ಇದು ಅತಿಯಾಗಿ ಸಂಗ್ರಹಗೊಂಡು ಬಿಡುಗಡೆಗೆ ಪ್ರಚೋದನೆ ನೀಡುತ್ತದೆಯೋ ಆಗ ಸಮಸ್ಯೆ. ಇದಕ್ಕೆ ಮನೆಯಲ್ಲಿ ಲಭ್ಯವಿರುವ ಸಾಮಾಗ್ರಿಗಳೇ ಪರಿಹಾರ ನೀಡುತ್ತವೆ.
ಓಮ ಕಾಳಿನಲ್ಲಿ ಥೈಮಾಲ್ ಎಂಬ ಪೋಷಕಾಂಶವಿದ್ದು ಜೀರ್ಣಾಂಗಗಳಲ್ಲಿ ಉತ್ಪತ್ತಿಯಾಗಿದ್ದ ವಾಯುಗಳನ್ನು ಕರಗಿಸಿಕೊಳ್ಳುವಂತೆ ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ. ಒಂದು ಲೋಟ ನೀರಿನಲ್ಲಿ ಅರ್ಧ ಚಿಕ್ಕ ಚಮಚ ಓಮ ಕಾಳುಗಳನ್ನು ಹಾಕಿ ಕುದಿಸಿ ಈ ನೀರನ್ನು ತಣಿಸಿ ಕುಡಿದರೆ ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು.ದಿನಕ್ಕೊಂದು ಲೋಟ ಈ ನೀರು ಕುಡಿದರೆ ಸಾಕು.
ಜೀರಿಗೆ ಕುದಿಸಿದ ನೀರಿನ ಸೇವನೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಜೀರಿಗೆಯಲ್ಲಿರುವ ಅವಶ್ಯಕ ತೈಲಗಳು ಲಾಲಾರಸವನ್ನು ಹೆಚ್ಚು ಹೆಚ್ಚಾಗಿ ಸ್ರವಿಸುವಂತೆ ಪ್ರಚೋದಿಸುತ್ತವೆ ಹಾಗೂ ಇದು ಆಹಾರವನ್ನು ಇನ್ನಷ್ಟು ಸುಲಭವಾಗಿ ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಅತಿಯಾಗಿ ಅನಿಲಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ ಎಂಬುದು ವೈದ್ಯರು ಹಾಗೂ ಮನೆಯಲ್ಲಿ ಹಿರಿಯರು ಹೇಳುತ್ತಲೇ ಬಂದಿರುವ ಪರಿಹಾರ. ಒಂದು ದೊಡ್ಡ ಚಮಚದಷ್ಟು ಜೀರಿಗೆಯನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಹತ್ತರಿಂದ ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ಈ ನೀರನ್ನು ಸೋಸಿ ಊಟವಾದ ಕೊಂಚ ಹೊತ್ತಿನ ಬಳಿಕ ಸೇವಿಸಬೇಕು.
ಗ್ಯಾಸ್ಟ್ರಿಕ್‌ನಿಂದ ಹೊಟ್ಟೆಯುಬ್ಬರಿಸಿದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು. ಇಂಗಿನಲ್ಲಿ ಬ್ಯಾಕ್ಟೀರಿಯಾಗಳು ಅಹಾರವನ್ನು ಅತಿಯಾಗಿ ಜೀರ್ಣಿಸಿಕೊಂಡು ಉತ್ಪತ್ತಿ ಮಾಡಿದ ಅನಿಲಗಳನ್ನು ಇಲ್ಲವಾಗಿಸುವ ಗುಣವಿದೆ. ದೇಹದಲ್ಲಿ ವಾತ ದೋಷವನ್ನು ಸರಿಪಡಿಸಲು ನೆರವಾಗುತ್ತದೆ. ವಾತ ದೋಷಕ್ಕೆ ದೊಡ್ಡ ಕರುಳು ಪ್ರಮುಖ ಕಾರಣ.ಕರುಳಿನಲ್ಲಿ ವಾತ ಹೆಚ್ಚಾಗುತ್ತಿದ್ದಂತೆಯೇ ವಾಯುವೂ ಹೆಚ್ಚುತ್ತದೆ ಎಂಬುದು ನಮಗೆ ತಿಳಿದಿದ್ದರೆ ಪರಿಹಾರ ಸುಲಭ. ಒಂದು ಚಿಕ್ಕ ತುಂಡು ಹಸಿಶುಂಠಿಯ ರಸವನ್ನು ಒಂದು ಚಿಕ್ಕ ಚಮಚ ಲಿಂಬೆರಸದೊಂದಿಗೆ ಊಟದ ಬಳಿಕ ಸೇವಿಸಬಹುದು. ಹಸಿ ಶುಂಠಿಯಿಂದ ತಯಾರಿಸಿದ ಟೀ ವಾಯುಪ್ರಕೋಪ ಶಮನಕಾರಕ.
ಚಿಕ್ಕ ಚಮಚ ಲಿಂಬೆರಸದಲ್ಲಿ ಅರ್ಧ ಚಿಕ್ಕ ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಕದಡಿ ಊಟದ ಬಳಿಕ ಕುಡಿಯುವುದು. ಈ ವಿಧಾನದಿಂದ ಜೀರ್ಣಾಂಗಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಿಕ್ಕ ಚಮಚ ತ್ರಿಫಲ ಚೂರ್ಣವನ್ನು ಹಾಕಿ ಐದರಿಂದ ಹತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ. ಈ ನೀರನ್ನು ತಣಿಸಿ ಉಗುರು ಬೆಚ್ಚನಿದ್ದಂತೆ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಹೆಚ್ಚಿನ ಪ್ರಮಾಣ ಸೇವಿಸಬಾರದು ಹಾಗೂ ಹೆಚ್ಚು ದಿನ ಸೇವಿಸಬಾರದು.
ಹೀಗೆಲ್ಲ ತಕ್ಷಣದ ಪರಿಹಾರ ತಕ್ಷಣದ ಪರಿಹಾರಕ್ಕೆ ಸಮಸ್ಯೆ ತಗ್ಗದೆ ಮುಂದುವರಿದರೆ ಖಂಡಿತವಾಗಿಯೂ ವೈದ್ಯರಲ್ಲಿ ಸಲಹೆ ಪಡೆದು ಅದರಂತೆ ನಡೆದುಕೊಳ್ಳುವುದು ಅಗತ್ಯ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


