ಇಂದೋರ್: ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆಯೊಂದು ಇಂದೋರ್ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.
ನವಜಾತ ಶಿಶುಗಳ ತೀವ್ರ ನಿಗಾ ಘಟಕದ (NICU) ಒಳಗಿದ್ದ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಒಂದು ಶಿಶು ಮಂಗಳವಾರ ಸಾವಿಗೀಡಾಗಿದೆ. ಆದಾಗ್ಯೂ, ಆಸ್ಪತ್ರೆ ಅಧಿಕಾರಿಗಳು ಸಾವಿಗೆ ಕಾರಣ ಇಲಿ ಕಡಿತವಲ್ಲ, ಆಕೆಯ ಗಂಭೀರ ವೈದ್ಯಕೀಯ ಸ್ಥಿತಿ ಎಂದು ಹೇಳಿದ್ದಾರೆ.
ಮಹಾರಾಜ ಯಶವಂತರಾವ್ ಆಸ್ಪತ್ರೆಯ NICU ಒಳಗೆ ಭಾನುವಾರ ಮತ್ತು ಸೋಮವಾರ ಸತತವಾಗಿ ಇಲಿಗಳು ಕಚ್ಚಿರುವ ಘಟನೆ ನಡೆದಿವೆ. ಹುಟ್ಟಿ ಮೂರ್ನಾಲ್ಕು ದಿನಗಳಷ್ಟೇ ಕಳೆದಿದ್ದ ಎರಡೂ ನವಜಾತ ಶಿಶುಗಳ ಬೆರಳುಗಳು, ತಲೆ ಮತ್ತು ಭುಜಗಳಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆಯು ಎಂವೈ ಆಸ್ಪತ್ರೆ ಸಂಯೋಜಿತವಾಗಿರುವ ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ ಗೆ ಶೋ–ಕಾಸ್ ನೋಟಿಸ್ ನೀಡಿದೆ. ಆಸ್ಪತ್ರೆ ಆಡಳಿತವು ಹಲವಾರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.
ಇಬ್ಬರು ನರ್ಸ್‌ಗಳನ್ನು ಅಮಾನತುಗೊಳಿಸಲಾಗಿದ್ದು, ಮುಖ್ಯ ನರ್ಸ್, ಪಿಐಸಿಯು ಉಸ್ತುವಾರಿ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಹೆಚ್ಚುವರಿಯಾಗಿ, ನರ್ಸಿಂಗ್ ಸೂಪರಿಂಟೆಂಡೆಂಟ್ ಅನ್ನು ಅವರ ಸ್ಥಾನದಿಂದ ವಜಾ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC